ಆಟಗಳು
ವ್ಯಾಯಾಮಾಭ್ಯಾಸಗಳಿಗಿಂತ ಭಿನ್ನವಾಗಿದ್ದು ದೇಹಕ್ಕೂ ಮನಸ್ಸಿಗೂ ಸಾಕಷ್ಟು ಸಾಧನೆ ರಂಜನೆ ಕೊಡುವ ಯೋಜನೆಗಳು. ವ್ಯಾಯಾಮಗಳಷ್ಟು ಕ್ರಮಬದ್ಧವಾಗದಿದ್ದರೂ ಆಟಗಳಿಂದ ಅಂಗಸಾಧನೆಯಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಮನೋರಂಜನೆ, ಉಲ್ಲಾಸ, ಹರ್ಷ, ವಿಹಾರ ದೊರೆಯುತ್ತವೆ. ಆಟವಾಡುವ ಗುಣ ನೈಸರ್ಗಿಕವೆನ್ನಲು ಮಕ್ಕಳೂ ಪ್ರಾಣಿಗಳೂ ಸಾಕ್ಷಿ. ನಾಯಿ, ಬೆಕ್ಕು ಮೊದಲಾದುವುಗಳಲ್ಲಿ ತಾಯಿ ಸ್ವಲ್ಪಕಾಲ ಮಗುವಿನೊಂದಿಗೆ ಆಟವಾಡುತ್ತದೆ. ಇಂಥ ಚಿಣ್ಣಾಟದಿಂದ ಮರಿಗೆ ಸಂತೋಷವಾಗುತ್ತದೆ. ಕರಡಿಗಳು ಜಾರುಗುಪ್ಪೆ ಆಟವಾಡುವುದನ್ನು ಕಂಡವರಿದ್ದಾರೆ. ಕೋತಿಗಳಲ್ಲಿ ಆಟ, ನೆಗೆತ ಸಾಮಾನ್ಯ. ಪಾರಿವಾಳ ಹಾರುವಾಗ ಲಾಗಹಾಕುವುದು. ವಿನೋದವಾಗಿ ಅಳಿಲುಗಳು ಜೂಟಾಟವಾಡುತ್ತವೆ. ಹುಚ್ಚೆದ್ದು ಕುಣಿದು ಓಡುವುದು ಕುದುರೆಗೆ ಒಂದು ಆಟ. ಪ್ರಾಣಿಗಳಲ್ಲಿನ ಆಟದ ಮನೋಧರ್ಮದ ಹಿಂದೆ ವಿನೋದಕ್ಕಿಂತ ಹಿರಿದಾದ ಮತ್ತೊಂದು ಉದ್ದೇಶವೂ ಇರುವಂತೆ ತೋರುತ್ತದೆ. ಕೇವಲ ರಂಜನೆಯಾಗಿ ತೋರುವ ಆಟ ಅವಕ್ಕೆ ಜೀವನನಿರ್ವಹಣೆಯಲ್ಲಿ ಪಾಲುಗೊಳ್ಳುವ, ಗೆಲ್ಲುವ ವರಸೆಗಳನ್ನು ಕಲಿಸುತ್ತದೆ. ವಿಚಾರ ಮಾಡಿದರೆ ಮಾನವನಲ್ಲೂ ಅಷ್ಟೆ. ಆಟದಿಂದ ಅಂಗಾಂಗಗಳ ಶಕ್ತಿ ವರ್ಧಿಸುತ್ತದೆ; ಕೈಚಳಕ ಹೆಚ್ಚುತ್ತದೆ. ಬುದ್ಧಿ ಕುದುರುತ್ತದೆ, ಸಮಯಸ್ಫೂರ್ತಿ, ಯುಕ್ತಿ, ಶ್ರಮಸಹಿಷ್ಣುತೆ, ಧೃತಿ, ಪುನಃ ಪ್ರಯತ್ನಮಾಡುವ ಆಕಾಂಕ್ಷೆ, ಸಾಮೂಹಿಕ ನಡೆನುಡಿಗಳು, ಒಗ್ಗಟ್ಟಿನ ಕಾರ್ಯನಿರ್ವಾಹಕ ಮನೋಧರ್ಮ, ಹೊಂದಿನಡೆಯುವ ಗುಣ-ಇವು ಬೆಳೆಯುತ್ತವೆ. ಎಂದಿದ್ದರೂ ಜೀವನ ನಿರ್ವಹಣೆಗೆ ಇವುಗಳ ಅಗತ್ಯವಿದ್ದೇ ಇದೆ. (ನೋಡಿ- ಅಂಗ-ಸಾಧನೆ) 
ವಿಷಯಪ್ರತಿಪಾದನೆಯ ಸೌಲಭ್ಯಕ್ಕಾಗಿ ಆಟಗಳ ಬೃಹದ್ ಕ್ಷೇತ್ರವನ್ನು ಮೂರು ಭಾಗಗಳನ್ನಾಗಿ ಮಾಡಲಾಗಿದೆ. ಒಂದನೆಯದು ಪ್ರಕೃತ ಭಾಗವಾದ ಆಟಗಳು. ಇಲ್ಲಿ ಪ್ರಾಚೀನ ಆಟಗಳು. ಜಾನಪದ ಆಟಗಳು ಮತ್ತು ಇತರ ಸ್ಥಳಜನ್ಯ ಅಥವಾ ಜನಬಳಕೆಯ ಆಟಗಳ ವಿಷಯವಿದೆ. ಎರಡನೆಯ ಭಾಗ ಕ್ರೀಡೆಗಳು (ನೋಡಿ- ಕ್ರೀಡೆಗಳು). ಇಲ್ಲಿ ಕ್ರಿಕೆಟ್, ಪುಟ್‍ಬಾಲ್ ಮೊದಲಾದ ಎಲ್ಲ ಆಟಗಳ ಪಟ್ಟಿ ಇದೆ. ವಿವರಗಳು ಆಯಾ ಆಟದ ಶೀರ್ಷಿಕೆಯ ಕೆಳಗೆ ಬಂದಿವೆ. ಮೂರನೆಯ ಭಾಗ ಒಂದು ಕಡೆ ವ್ಯಾಯಾಮಕ್ಕೂ ಮತ್ತೊಂದು ಕಡೆ ನೇರ ಪಂದ್ಯಗಳಿಗೂ ಸಂಬಂಧಿಸಿದ ದೈಹಿಕ ಚಟುವಟಿಕೆಗಳು. 

ಪ್ರಾಚೀನ ಆಟಗಳು: ಪ್ರಾಚೀನ ಮಾನವ ಅಲೆಮಾರಿ ಜೀವನ ಮುಗಿಸಿ ನೆಲೆಸುವುದನ್ನು ಅಭ್ಯಸಿಸುವ ಮುನ್ನ ಏನು ಆಟಗಳನ್ನು ಆಡುತ್ತಿದ್ದನೆಂಬುದಕ್ಕೆ ದಾಖಲೆಗಳಿಲ್ಲ. ಅಂತೂ ಅವನಲ್ಲಿ ಕಲಾಭಿರುಚಿ ಇತ್ತು. ಕೈಕೆಲಸದಲ್ಲಿ ಅವನು ಪಳಗಿದ್ದ. ಮಾಡುವ ಕೆಲಸಕಾರ್ಯಗಳಲ್ಲಿ ಕ್ರಮೇಣ ಉತ್ತಮ ಮಾರ್ಪಾಟುಗಳನ್ನು ಮಾಡಲುಪಕ್ರಮಿಸಿದ್ದ ಎಂಬ ವಿಷಯಗಳು ಅವನು ಬರೆದ ಚಿತ್ರ, ಉಪಯೋಗಿಸುತ್ತಿದ್ದ ಆಯುಧಾದಿ ಪಳೆಯುಳಿಕೆಗಳಿಂದ ವ್ಯಕ್ತವಾಗುತ್ತದೆ. ಇಷ್ಟೆಲ್ಲ ತಿಳಿದಿದ್ದವನು ಆಟಗಳನ್ನು ಆಡುತ್ತಿದ್ದಿರಬೇಕು ಎಂದು ಊಹಿಸಲು ಆಸ್ಪದವಿದೆ. ಆಹಾರಾನ್ವೇಷಣೆಗಾಗಿ ಅವನು ಅಗತ್ಯ ಕೈಗೊಳ್ಳಬೇಕಾಗಿದ್ದ ಅಲೆತ ಮತ್ತು ಬೇಟೆಯ ವಿಧಾನಗಳು ಅವನಿಗೆ ಸಾಕಷ್ಟು ಆಹಾರ ಸಿಕ್ಕಾಗ ತೃಪ್ತಿ ಉಕ್ಕೇರಿದಾಗ ಆತ ಹಾಡಿ ಕುಣಿಯುತ್ತಿದ್ದುದುಂಟು. ಹಾಗೆಯೇ ಆಡಿ ನಲಿದಿರಬೇಕು. ಅವನ ಈ ಉನ್ಮತ್ತ ನೃತ್ಯಗಳಿಂದಲೇ ಸಂಗೀತ, ಕಾವ್ಯ, ನಾಟಕಗಳು ಹುಟ್ಟಿಬಂದುವೆಂದು ಊಹಿಸುತ್ತಾರೆ. ಕ್ರೀಡಾವಿನೋದವೂ ಆಗಲೇ ಹುಟ್ಟಿರಬಹುದು.

ವೇದಗಳಲ್ಲಿ ಆಟಗಳ ಉಲ್ಲೇಖವಿದೆ. ಋಗ್ವೇದದಲ್ಲಿ ಅಕ್ಷವೆಂಬ ಪಗಡೆಯಾಟದ ಹೆಸರಿದೆ. ಪ್ರಸಿದ್ಧವಾದ ಅರುವತ್ತುನಾಲ್ಕು ವಿದ್ಯೆಗಳಲ್ಲಿ ಕ್ರೀಡೆಗಳೂ ಸೇರಿವೆ. ಜಲ ಕ್ರೀಡೆ, ಜನಕ್ರೀಡೆ, ವೈಹಾಳಿ, ಮಲ್ಲಯುದ್ಧ, ಮೃಗಯಾ ವಿಹಾರ: ಪಗಡೆ, ಮುಷ್ಟಿಯುದ್ಧ, ಧನುರ್ವಿದ್ಯೆಯೇ ಮೊದಲಾದ ಇತರ ಯುದ್ಧಗಳು, ನೃತ್ಯ, ಲಾಸ್ಯ, ರಾಸಕ್ರೀಡೆ, ಹಲವು ಬಗೆಯ ಚೆಂಡಾಟಗಳು-ಇವುಗಳ ಬಗ್ಗೆ ರಾಮಾಯಣ, ಮಹಾಭಾರತ, ಇತಿಹಾಸಗಳಲ್ಲೂ ಕಾಳಿದಾಸಾದಿ ಮಹಾಕವಿ ಕೃತಿಗಳಲ್ಲೂ ವರ್ಣನೆಗಳಿವೆ. ಕನ್ನಡ ಸಾಹಿತ್ಯದಲ್ಲೂ ಅಷ್ಟೆ. ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಮರಕೋತಿ ಆಟದ ವರ್ಣನೆ ಇದೆ. ವಡ್ಡಾರಾಧನೆಯ ಭದ್ರಬಾಹುಭಟಾರರ ಕಥೆಯಲ್ಲಿ, ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ, ನಂಜುಂಡಕವಿಯ  ಕುಮಾರರಾಮಸಾಂಗತ್ಯದಲ್ಲಿ, ನಾರಣಪ್ಪನ ಗದುಗಿನ ಭಾರತದಲ್ಲಿ ಅಚ್ಚಗನ್ನಡದ ಆಟದ ಹೆಸರುಗಳೂ ವರ್ಣನೆಗಳೂ ಇವೆ. 
ಪ್ರಾಚೀನ ಗ್ರೀಸಿನಲ್ಲಿ ಅನೇಕಾನೇಕ ಆಟಗಳನ್ನು ಆಡುತ್ತಿದ್ದರಲ್ಲದೆ ಆಟಗಾರರಲ್ಲಿನ ಪಂದ್ಯಭಾವನೆ ಉತ್ಕಟವಾಗಿತ್ತು. ಸ್ಪರ್ಧೆಗಳು ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದ್ದುವು. ಲಕ್ಷಾಂತರ ಜನ ಸೇರಿ ಅವನ್ನು ವೀಕ್ಷಿಸುತ್ತಿದ್ದರು. ಗೆದ್ದವರನ್ನು ಗೌರವಿಸುತ್ತಿದ್ದರು. ವ್ಯಾಯಾಮ ಮತ್ತು ಆಟಗಳಿಂದ ಅವರ ದೇಹದಾಢ್ರ್ಯ ಮತ್ತು ದೇಹಸೌಂದರ್ಯ ಹೇಗೆ ವರ್ಧಿಸಿದ್ದುವೆಂಬುದಕ್ಕೆ ಅವರ ಶಿಲ್ಪ ಮತ್ತು ವರ್ಣಕಲೆಗಳು ಸಾಕ್ಷಿ. ಈಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯಗಳಲ್ಲಿ ಮುಷ್ಟಿಕಾಳಗ, ಜಟ್ಟಿಕಾಳಗ, ಭಾರ ಎತ್ತುವಿಕೆ, ಓಟದ ಮತ್ತು ರಥದ ಪಂದ್ಯಗಳು-ಇವುಗಳ ವಿಸ್ತøತವರ್ಣನೆಗಳಿವೆ. ಗ್ರೀಸಿನ ಕೊನೆಗಾಲದಲ್ಲಿ, ಅದರ ಅವನತಿಗೆ ಪರಿಹಾರವೇನೆಂದು ಕೇಳಲಾಗಿ ದೇಶದ ಆಟಗಳನ್ನು ಪುನರುಜ್ಜೀವನಗೊಳಿಸುವುದೇ ಎಂದು ನಗರದೇವತೆ ಕಣಿ ಹೇಳಿತಂತೆ. ಇಂಥ ಮಾತುಗಳಿಂದ ಅಂದು ಆಟಗಳಿಗೆ ಇದ್ದ ಪ್ರಾಶಸ್ತ್ಯ ಗೊತ್ತಾಗುತ್ತದೆ. ಒಲಿಂಪಿಯದಲ್ಲಿ ವರ್ಷಾವಧಿ ನಡೆಯುತ್ತಿದ್ದ ಆಟಗಳಂತೂ ವಿಶ್ವವಿಖ್ಯಾತವಾಗಿವೆ. (ನೋಡಿ- ಒಲಂಪಿಕ್---ಕ್ರೀಡೆಗಳು) ರೋಮನ್ನರಿಗೆ ಎಲ್ಲಕ್ಕೂ ಸ್ಫೂರ್ತಿ ದೊರೆತಿದ್ದು ಗ್ರೀಸಿನಿಂದ. ಗ್ರೀಸಿನ ಎಲ್ಲ ಆಟದ ಮಾದರಿಗಳೂ ರೋಮನ್ನರಲ್ಲಿ ಬಳಕೆಗೆ ಬಂದುವು. ಅಂದಿನ ರೋಮನ್ ಸರ್ಕಸ್, ಸೈಕಲ್ ಆಟಪ್ರದರ್ಶನಗಳು, ರಥಪಂದ್ಯಗಳು ಬಹಳ ಪ್ರಸಿದ್ಧವಾಗಿವೆ.

ಜಾನಪದ ಆಟಗಳು: ಹಲ್ಲುಬರುತ್ತಿರುವ ಚಿಣ್ಣರಿಂದ ಹಿಡಿದು ಹಲ್ಲುದುರುತ್ತಿರುವ ಅಜ್ಜಂದಿರವರೆಗೂ ಹಿಡಿಸುವ ಬಗೆಬಗೆಯ ಆಟಗಳಿವೆ. ಒಂದೇ ಆಟದಲ್ಲಿ ವೈವಿಧ್ಯವೂ ಇದೆ. ಒಂದೇ ಬಗೆಯ ಆಟಕ್ಕೆ ಒಂದೊಂದು ಹಳ್ಳಿಗಾಡಿನಲ್ಲೂ ಬೇರೆ ಬೇರೆ ಹೆಸರುಗಳಿವೆ.

ಜಾನಪದ ಆಟಗಳು ತಲತಲಾಂತರದಿಂದ ರೂಢಮೂಲವಾಗಿ ಬೆಳೆದಿವೆ. ಅವುಗಳ ಆದಿಯನ್ನು ಬೆದಕುವುದು ಕಷ್ಟ. ಬೆಳೆದು ಬಂದ ಬಗೆಗೆ ಆಧಾರಗಳನ್ನು ಕೊಡುವುದು ಕಷ್ಟಕರ. ಎಷ್ಟೋ ಬಗೆಯ ಆಟಗಳು ಚಲಾವಣೆಗೆ ಬಂದು ಸವಕಲಾಗಿ ಹೋಗಿರಬಹುದು. ಸಾಹಿತ್ಯಿಕ, ಶಾಸ್ತ್ರೀಯ ಅಥವಾ ಚಾರಿತ್ರಿಕ ಗ್ರಂಥಗಳಲ್ಲಿ ವರ್ಣನೆಯ ಸದವಕಾಶ ಪಡೆಯದ ಆಟಗಳು ಅವೆಷ್ಟೋ.
ಭಾರತೀಯ ಜಾನಪದ ಆಟಗಳ ವೈಶಿಷ್ಟ್ಯ ಮೆಚ್ಚುವಂಥಾದ್ದು. ಅತ್ಯಂತ ಕಡಿಮೆ ಖರ್ಚು, ಅಧಿಕಾಧಿಕ ಪ್ರಯೋಜನ ಅಥವಾ ಸಂತೋಷದ ಲಾಭ. ಇದು ಎಲ್ಲ ಆಟಗಳ ಸಾಮಾನ್ಯಗುಣ. ಕೆಲವು ಆಟಗಳಿಗೆ ಆಡುವವರಿದ್ದರೆ ಸಾಕು. ಮತ್ತೆ ಕೆಲವಕ್ಕೆ ಹುಣಸೇಬೀಜ, ಹಾಲವಾಣದ ಬೀಜ, ಮೊಳ, ಎರಡು ಮೊಳದುದ್ದ ಕಡ್ಡಿಗಳು, ಗಜ್ಜುಗ, ಆಕಾರಕ್ಕೆ ಹೊಂದುವ ಮಡಕೆಯ ಹೆಂಚಿನ ಅಥವಾ ಬಳಪದ ಕಲ್ಲಿನ ಚೂರುಗಳು, (ಗೂಚೆ, ಗೋರ್ಚಿ), ಹಳೆಯ ಹರಕಲು ಬಟ್ಟೆ ಚೂರುಗಳು (ಚೆಂಡಿಗಾಗಿ) ಹಳೆ ಹಲಗೆಯ ಪಟ್ಟಿಗಳು (ಗಾರು-ದಾಂಡು), ಅಗ್ಗದಗಾರೆಯ, ಕಲ್ಲಿನ ಅಥವಾ ಗಾಜಿನ, ಸೀಸದ ಗುಂಡಿಗಳು ಇಷ್ಟೇ ಸಾಕು. ಬಹಳ ಶ್ರೀಮಂತ ಆಟಗಳಾದ ಚದುರಂಗ, ಪಗಡೆಯ ಆಟಗಳಿಗೂ ಐದಾರು ರೂಪಾಯಿಗಳ ಬಂಡವಾಳ ಸಾಕು. ನಿರ್ವಹಣೆಯ ಮತ್ತು ಮರುಕಳಿಸುವ ಖರ್ಚಂತೂ ಇಲ್ಲವೇ ಇಲ್ಲವೆನ್ನಬಹುದು.

ಜಾನಪದ ಆಟಗಳಲ್ಲೂ ಒಳಾಂಗಣ ಮತ್ತು ಹೊರಾಂಗಣ ಆಟಗಳು ಎಂದು ಎರಡು ವಿಧ. ಒಳಾಂಗಣ ಆಟಗಳನ್ನು ಅವರವರ ವಯೋಗುಣ, ಬುದ್ಧಿಮಟ್ಟಕ್ಕೆ ತಕ್ಕಂತೆ ಸ್ತ್ರೀ-ಪುರುಷರೀರ್ವರೂ ಆಡಬಹುದು. ಹೊರಾಂಗಣ ಆಟಗಳಲ್ಲಿ ಕುಂಟೇ ಬಿಲ್ಲೆ, ಕುಂಟಾಟ, ಕಣ್ಣುಮುಚ್ಚಾಲೆ (ಅವತೇಗುಮ್ಮನಾಟ), ಕಾಚಿಕೋಲ್ ಬಿಂದೀಕೋಲ್, ಉಪೂಪೆಕಡ್ಡಿ-ಇಂಥ ಆಟಗಳನ್ನು ಹೆಣ್ಣು, ಗಂಡು ಮಕ್ಕಳಿಬ್ಬರೂ-ಅದರಲ್ಲೂ ಆಡಬಹುದು. ಗೋಲಿ, ಗಜ್ಜುಗ, ಚಿಣ್ಣಿಕೋಲು, ಚೆಂಡು, ಬುಗುರಿ, ಮರಕೋತಿ, ಕೊಕ್ಕೊ, ತುತು ತುತು (ಹುಡುತುತು, ಗುಡುಗುಡು ಕಬಡಿ) ಇಂಥ ಆಟಗಳನ್ನು ವಿಶೇಷವಾಗಿ ಗಂಡುಮಕ್ಕಳು ಆಡುತ್ತಾರೆ. ಹೆಣ್ಣು ಗಂಡುಗಳಿಬ್ಬರೂ-ಅದರಲ್ಲೂ ತಾರುಣ್ಯದಲ್ಲಿರುವವರು-ಒಟ್ಟಿಗೆ ಸೇರಿ ಆಡತಕ್ಕ ಹೊರಾಂಗಣ ಆಟಗಳು ಈ ಇಪ್ಪತ್ತನೆಯ ಶತಮಾನದ ದ್ವಿತೀಯಾರ್ಧದಲ್ಲೂ ಜಾನಪದ ಜಾಯಮಾನಕ್ಕೆ, ಅದರ ಸಂಸ್ಕøತಿಯ ಆವರಣಕ್ಕೆ ಒಗ್ಗಿಲ್ಲ. ಒಳಾಂಗಣ ಆಟಗಳಲ್ಲಿ ಸ್ತ್ರೀ-ಪುರುಷರಿಬ್ಬರೂ ಭಾಗವಹಿಸುವುದು ಸುಪರಿಚಿತ. ನೆಂಟರಿಷ್ಟರ, ಒಂದೇ ಮನೆಯವರ ಮಿತಿಗೊಳಪಟ್ಟಿದೆ.

ಒಳಾಂಗಣಾಟಗಳು: 

1 ಅಣ್ಣೀಕಲ್ಲು: ಹೆಣ್ಣುಮಕ್ಕಳ ಆಟ. ಇದಕ್ಕೆ ಗಜ್ಜುಗದ ಗಾತ್ರದ ಕಲ್ಲುಗಳು ಬೇಕು. ಇಬ್ಬರು ಅಥವಾ ಹೆಚ್ಚು ಜನ ಆಡಬಹುದು. ಒಬ್ಬೊಬ್ಬರಿಗೆ ಐದೈದು ಕಲ್ಲುಗಳು. ಇದರಲ್ಲಿ ವ್ಯತ್ಯಾಸ ಮಾಡಿಕೊಳ್ಳಬಹುದು. ಎಲ್ಲರ ಕಲ್ಲುಗಳನ್ನೂ ಒಟ್ಟಿಗೆ ಇಟ್ಟು ಯಾರಾದರೊಬ್ಬರು ಆಟ ಪ್ರಾರಂಭಿಸಬೇಕು. ಆಮೇಲೆ ಕುಳಿತಿರುವವರಲ್ಲಿ ಅಪ್ರದಕ್ಷಿಣವಾಗಿ ಆಟ ಮುಂದುವರಿಯುತ್ತದೆ. ಕಲ್ಲುಗಳನ್ನೆಲ್ಲ ಅನುಕೂಲವಾದಷ್ಟು ಎತ್ತರಕ್ಕೆ ಎರಡೂ ಅಂಗೈಗಳಿಂದ ಮೇಲೆಸೆದು ಮುಂಗೈ ಮೇಲೆ ಆಟದ ನಿಬಂಧನೆಯ ಪ್ರಕಾರ ಒಂದೋ ಎಷ್ಟೋ ಆತುಕೊಂಡು ಬಾಕಿಯನ್ನು ಕೆಳಗೆ ಬೀಳಬಿಡಬೇಕು. ಕೆಲವು ಬಗೆಯ ಆಟದಲ್ಲಿ ಕೈಮೇಲಾಗಲಿ, ನೆಲದ ಮೇಲಾಗಲಿ ಮೂರು ಕಲ್ಲು ಇರಲವಕಾಶವಿಲ್ಲ. ಆನುವುದರಲ್ಲೂ ವೈವಿಧ್ಯವಿದೆ. ಕಲ್ಲುಗಳನ್ನು ಮಾರ್ಗಮಧ್ಯದಲ್ಲಿ ಮೇಲಿನಿಂದ ಹಿಡಿಯಬೇಕು. ಇದಕ್ಕೆ ಸೆಣಪಿ ಎನ್ನುತ್ತಾರೆ.

ಒಂದು ಕಲ್ಲನ್ನು ಮಾತ್ರ ಮುಂಗೈ ಮೇಲೆ ಆತುಕೊಂಡು ಮತ್ತೆ ಅದನ್ನು ಬೀಳಿಸದಂತೆ ಮೇಲೆಸೆದು ಅಂಗೈಯಲ್ಲಿ ಆನಬೇಕು. ಯಾವ ಸಂದರ್ಭದಲ್ಲೂ ಬಿಟ್ಟರೂ ಆಟ ಹೋಯಿತು. ಆತ ಕಲ್ಲನ್ನು ಮತ್ತೆ ಮೇಲೆಸೆದು ಅದು ಕೆಳಗೆ ಬೀಳುವಷ್ಟರಲ್ಲಿ ನೆಲದಲ್ಲಿ ಬಿದ್ದ ಕಲ್ಲುಗಳಲ್ಲಿ ಒಂದನ್ನು ಎತ್ತಿಕೊಂಡು ಮೇಲಿನದನ್ನು ಆನಬೇಕು. ತಪ್ಪಿದರೆ ಆಟ ಹೋಯಿತು. ನೆಲದ ಮೇಲೆ ಇತರ ಕಲ್ಲುಗಳನ್ನು ಅಲ್ಲಾಡಿಸಿದರೂ ಆಟ ಹೋಯಿತು ಹೀಗೆ ಒಂದು ಕಲ್ಲಿನಿಂದ, ಒಂದೊಂದೇ ಕಲ್ಲಿನಂತೆ ಗೆಲ್ಲುತ್ತ ಒಂದೂ ಸೀಬೀಬಿ ಎರಡೂ ಗರಡಾಳ, ಮೂರು ಮುತ್ತಿನಚೆಂಡು, ನಾಕೂ ನಾಗಪ್ಪ, ಐದೂ ಪಂಚಾಂಗ, ಆರೂ ದಾಳಿಂಬೆ, ಏಳಂಬೇಳೆ, ಎಂಟೂ ರಾಯರ ಗಂಟೆ, ಒಂಬೈನೋಲ್ಗ ಎಂದು ಹೇಳುತ್ತ ಇರುವ ಹತ್ತು ಕಲ್ಲುಗಳನ್ನೂ (ಇಬ್ಬರಿದ್ದರೆ ಒಬ್ಬೊಬ್ಬರಿಗೆ ಐದು ಕಲ್ಲುಗಳಂತೆ) ಗೆದ್ದರೆ ಆಟಗಾರ್ತಿ ಗೆದ್ದಂತಾಯಿತು. ಆಮೇಲೆ ಮುಂದಿನವಳ ಆಟ. ಕಲ್ಲಿನ ಸಂಖ್ಯೆಯಲ್ಲಿ, ಆನುವುದರ ಭಂಗಿಯಲಿ,್ಲ ಗೆದ್ದಮೇಲೆ ಸೋತವರಿಗೆ ವಿಧಿಸುವ ಶಿಕ್ಷೆಯಲ್ಲಿ, ಇತರ ನಿಯಮಗಳಲ್ಲಿ ವೈವಿಧ್ಯವಿಲ್ಲ.

2 ಹುಣಿಸೇ ಬೀಜದ ಆಟ: ಇದಕ್ಕೆ ಸಾಮಾನ್ಯವಾಗಿ ಇಪ್ಪತ್ತು ಇಪ್ಪತ್ತು ಹುಣಿಸೇಬೀಜಗಳು ಬೇಕು. ಹಾಲಿವಾಣದ ಬೀಜಗಳೂ ಆಗಬಹುದು. ಕೆಲವರು ಕವಡೆಗಳನ್ನೂ ಉಪಯೋಗಿಸುತ್ತಾರೆ. ಇಬ್ಬರು ಅಥವಾ ಹೆಚ್ಚು ಜನ ಆಡಬಹುದು. ಬೀಜಗಳನ್ನೆಲ್ಲ ಬೊಗಸೆಯಲ್ಲಿ ಸೇರಿಸಿ ನೆಲದಮೇಲೆ ಚೆಲ್ಲುವುದು. ಆಮೇಲೆ ಒಂದಕ್ಕೊಂದು ತಾಟಿಸುವುದು. ಮತ್ತೊಂದು ಬೀಜ ಅಲ್ಲಾಡಕೂಡದು. ಹೀಗೆ ತಾಟಿಸಿದ ಎರಡು ಬೀಜಗಳನ್ನು ಗೆದ್ದಂತೆ. ಹೀಗೆ ಗುರಿ ತಪ್ಪುವತನಕ ಅಥವಾ ಇತರ ಬೀಜಗಳು ಅಲ್ಲಾಡದಿರುವ ತನಕ ಆಟ ಮುಂದುವರಿಯುತ್ತದೆ. ತಪ್ಪಿದಲ್ಲಿ ಬೇರೆಯವರ ಆಟ. ಎಲ್ಲವನ್ನೂ ಗೆದ್ದಮೇಲೆ ತಮ್ಮ ಪಾಲಿಗೆ ಬಂದ ಬೀಜಗಳನ್ನು ಎಣಿಸಿದರೆ ಎಷ್ಟು ಕಡಿಮೆಯಾಗಿದೆಯೋ ಅಷ್ಟೂ ಸೋತಂತೆ. ಹೆಚ್ಚಾಗಿದ್ದರೆ ಅಷ್ಟೂ ಗೆದ್ದಂತೆ. ಮುಂದಿನ ಆಟಕ್ಕೆ ಇಬ್ಬರೂ ಸಮನಾಗಿ ಬೀಜಗಳನ್ನು ಹಾಕಬೇಕು. ಇದರ ಪರಿಣಾಮವಾಗಿ ಆಟದಲ್ಲಿ ಕೊನೆಯಲ್ಲಿ ಯಾರಾದರೂ ಸೋಲಬಹುದು.

3 ಸರಿಬೆಸ: ಎಂದರೆ ಸಮ, ವಿಷಮ-ಎಂದರ್ಥ. ಇದನ್ನು ಸಾಮಾನ್ಯವಾಗಿ ಇಬ್ಬರು ಅಡಕೆ ಇಟ್ಟುಕೊಂಡು ಆಡುತ್ತಾರೆ. ಮದುವೆ ಮನೆಗಳಲಿ,್ಲ ಚಪ್ಪರದ ಹಟ್ಟಿಯಲ್ಲಿ, ಕಾಲುಂಗುರಶಾಸ್ತ್ರ ಮಾಡುವಾಗ, ಎಣ್ಣೆ ಅರಶಿನ ಹಚ್ಚಿ ವೀಳ್ಯಶಾಸ್ತ್ರ ಮಾಡುವಾಗ, ಲಗ್ನದ ಕಾಲದ ಧಾರಾಮುಹೂರ್ತದಲ್ಲಿ ಮತ್ತು ಊಟಕ್ಕೆ ಕುಳ್ಳಿರಿಸಿದಾಗ ಹಂತಿಯಮೇಲೆ ಎಲೆ ಅಡಿಕೆ ಕೊಡುವುದುಂಟು. ಈ ಸಂದರ್ಭದಲ್ಲಿ ಮಕ್ಕಳು ಸೇರಿ ಆಟವನ್ನು ಅಲ್ಲೇ ಆಡುತ್ತ ಲಲ್ಲೆ ಮಾಡುತ್ತಾರೆ. ಮದುವೆಯ ನಾನಾ ಶಾಸ್ತ್ರಗಳ ಅಂಗವಾಗಿ ಧಾರೆಯಾದ ಮೇಲೆ ಹೆಣ್ಣು ಗಂಡುಗಳು ಈ ಆಟ ಆಡಬೇಕು. ಪುಟ್ಟತಂಗಿಯರೂ ದಂಪತಿಗಳೂ ಸರಿಬೆಸವಾಡಿದರೂ ಎಂಬ ಜಾನಪದ ಗೀತೆಯನ್ನೂ ಮುತ್ತೈದೆಯರು ಹಾಡುತ್ತಾರೆ.

ಆಟದ ವಿವರ: ಇಬ್ಬರೂ ತಮ್ಮಲ್ಲಿರುವ ಅಡಕೆಗಳಲ್ಲಿ ಇಷ್ಟ ಬಂದಷ್ಟನ್ನು ಒಂದು ಮುಷ್ಟಿಯಲ್ಲಿ ಅವಿತಿಟ್ಟುಕೊಂಡು ಸರಿಯೊ ಬೆಸವೊ ಎಂದು ಕೇಳಬೇಕು. ಎದುರಾಳಿ ಊಹಿಸಿ ಸರಿ ಇಲ್ಲವೇ ಬೆಸ ಎನ್ನಬೇಕು. ಎಣಿಸಿ ನೋಡಿದಾಗ ಹೇಳಿದಂತೆ ಸರಿಯೊ ಅಥವಾ ಬೆಸವೊ ಆಗಿದ್ದರೆ ಹೇಳಿದವರಿಗೆ ಅಷ್ಟು ಅಡಿಕೆಯನ್ನು ಕಟ್ಟಿಕೊಡಬೇಕು. ಇನ್ನು ಆಟ ಬದಲಾವಣೆ. ಮೊದಲು ತೋರಿಸುತ್ತಿದ್ದವರು ಈಗ ಹೇಳಬೇಕು. ಹೀಗೆ ತಮ್ಮಲ್ಲಿರುವ ಅಡಕೆಗಳನ್ನು ಸೋಲುವ ತನಕ ಆಟವಾಡಬಹುದು.

4 ಉದ್ದಿನಮೂಟೆ ಆಟ: ಇದಕ್ಕೆ ಆಡುವವರ ಕೈಗಳೇ ಸಾಕು. ಪುಟ್ಟ ಹೆಣ್ಣು ಗಂಡುಮಕ್ಕಳು ಐದಾರು ಜನ ಸೇರಿ ಒಟ್ಟಿಗೆ ತಮ್ಮ ತಮ್ಮ ಎರಡೂ ಕೈ ಮುಷ್ಟಿಗಳನ್ನು ಒಂದರಮೇಲೊಂದು ಜೋಡಿಸಿ ಹಿಡಿದುಕೊಳ್ಳಬೇಕು. ಇವೆಲ್ಲವೂ ಮೂಡೆ(ಮೂಟೆ)ಗಳು. ದೊಡ್ಡಮಗುವೊಂದು ತನ್ನ ಒಂದು ಕೈ ಮುಷ್ಟಿಯನ್ನು ಮಾತ್ರ ಮೇಲಿಟ್ಟು ಇನ್ನೊಂದು ಕೈ ತರ್ಜನೀ ಬೆರಳಿನಿಂದ ಇದೇನು ಮೂಡೆ, ಇದೇನು ಮೂಡೆ ಎಂದು ಕೇಳಬೇಕು. ಒಂದೊಂದು ಮಗುವೂ ತನ್ನ ಮೂಡೆ ಉದ್ದಿನದೊ, ಹೆಸರಿನದೊ ಕಡಲೆಯದೊ, ತಡಗುಣಿಯದೊ ಎಂದು ಹೇಳಬೇಕು. ಆಮೇಲೆ ಮೂಡೆಗಳ ಸಾಲಿಗೆ ಎಣ್ಣೆ ಹಚ್ಚಿದಂತೆಯೂ, ಬಿಸಿನೀರು ಹುಯ್ದಂತೆಯೂ, ಸೀಗೆ ಹಾಕಿ ತಿಕ್ಕಿದಂತೆಯೂ ಮತ್ತು ಉಶ್, ಉಶ್, ಉಶ್ ಎಂದು ನೀರು ಹುಯ್ದಂತೆ ನಟಿಸಿ, ಒರಸಿ ಚಿನ್ನದ ಕತ್ತೀಲಿ ಹೊಡೆಯಾನೊ ಎಂದು ಹೇಳಿ ಕೈ ಬೀಸುವಷ್ಟರಲ್ಲಿ ಎಲ್ಲರೂ ತಮ್ಮ ಕೈಗಳನ್ನು ಬೆನ್ನ ಹಿಂದೆ ಬಚ್ಚಿಟ್ಟುಕೊಳ್ಳಬೇಕು. ಈಗ ಆಟ ಮತ್ತೊಂದು ಮುಖ್ಯ ತಿರುವಿಗೆ ಬಂದು ನಿಲ್ಲುತ್ತದೆ. ದೊಡ್ಡಮಗು ಪ್ರತಿಯೊಬ್ಬರನ್ನೂ ಪ್ರಶ್ನೆ ಕೇಳುತ್ತದೆ.

ಕೈಕಾಲೆಲ್ಲ ಎಲ್ಲಿಗೆ ಹೋದೋ ? ಸಂತೆಗೆ ಹೋದೊ, ಸಂತೇನ್ ಕೊಡ್ತು ? ಕಬ್ಬು ಕೊಡ್ತು, ಕಬ್ಬೇನ್ ಮಾಡ್ದೆ ? ತಿಂದು ಸಿಪ್ಪೆ ತಿಪ್ಪಗೆ ಹಾಕ್ದೆ, ತಿಪ್ಪೇನ್ ಕೊಡ್ತು ? ಗೊಬ್ಬರ ಕೊಡ್ತು, ಗೊಬ್ಬರ ಏನ್ ಮಾಡ್ದೆ ? ಹೊಲಕ್ಹಾಕ್ದೆ, ಹೊಲ ಏನ್ ಕೊಡ್ತು ? ಹುಲ್ಲು ಕೊಡ್ತು, ಹುಲ್ಲೇನ್ ಮಾಡ್ದೆ ? ಹಸೀಗ್ಹಾಕ್ದೆ, ಹಸೇನ್ ಕೊಡ್ತು ? ಹಾಲು ಕೊಡ್ತು.
ಹೀಗೆ ಪ್ರಶ್ನೆ- ಅದಕ್ಕೆ ಉತ್ತರ : ಒಂದೊಂದು ಮಗುವೂ ಉತ್ತರ ಕೊಡುತ್ತ ಹೋಗಿ ಕೊನೆಗೆ ಯಾವುದೋ ಒಂದು ರಸಸನ್ನಿವೇಶದಲ್ಲಿ ಚಮತ್ಕಾರದ ಉತ್ತರ ಬಂದಾಗ ಎಲ್ಲರೂ ನಗಬೇಕು. ಅಲ್ಲಿಗೆ ಮುಕ್ತಾಯ.

5. ಹರಳು ಮಣೆ ಆಟ : ವಿಶೇಷವಾಗಿ ಹೆಣ್ಣುಮಕ್ಕಳ ಆಟ. ಚನ್ನಮಣೆ ಆಟ ಎಂದೂ ಹೆಸರು. ಇದಕ್ಕೆ ಒಂದೊಂದು ಸಾಲಿನಲ್ಲಿ ಏಳು ಏಳು ಪುಟ್ಟ ಬೋಗುಣಿಗಳಂಥ ಎರಡು ಸಾಲುಗುಳಿಗಳುಳ್ಳ ಸುಮಾರು ಐದಾರು ಅಂಗುಲ ಅಗಲ, ಹದಿನೈದು-ಹದಿನಾರು ಅಂಗುಲ ಉದ್ದವುಳ್ಳ ಆಯತಾಕಾರದ ಒಂದು ಮರದ ಮಣೆ ಮತ್ತು ಒಂದು ಗುಳಿಗೆ ಐದರಂತೆ 14(5=70 ಹುಣಸೇಬೀಜ ಬೇಕು. ಒಂದೊಂದು ಕಡೆಗೆ ಒಬೊಬ್ಬರಂತೆ ಇಬ್ಬರಾಡುವ ಈ ಆಟದಲ್ಲಿ ಮೊದಲು ಎಲ್ಲ ಮನೆಗಳಿಗೂ (ಗುಳಿ) ಐದೈದರಂತೆ ಹರಳು ತುಂಬಿ ಯಾರಾದರೊಬ್ಬರು ಆಟ ಮೊದಲು ಮಾಡಬೇಕು.
ಯಾವುದಾದರೂ ಒಂದು ಮನೆಯ ಐದು ಹರಳನ್ನು ತೆಗೆದುಕೊಂಡು ಮುಂದಿನ ಮನೆಗಳಿಗೆ ಒಂದೊಂದರಂತೆ ಹಾಕಬೇಕು. ಮುಗಿದಾಗ ಮುಂದಿನ ಮನೆಯನ್ನು ಮುರಿದು ಅದಕ್ಕೆ ಹಾಕದೆ ಅದರ ಮುಂದಿನ ಮನೆಗೆ ಹಾಕುತ್ತ ಹೋಗಬೇಕು. ಹೀಗೆ ಹಾಕುವಾಗ ಖಾಲಿಮನೆ ಸಿಕ್ಕಿದರೆ ಅದನ್ನು ಬೆರಳುಗಳಿಂದ ಸವರಿ ಮುಂದಿನ ಮನೆಯ ಬೀಜಗಳನ್ನು ತೆಗೆದಿಟ್ಟುಕೊಳ್ಳಬೇಕು. ಅವು ಗೆದ್ದ ಹರಳು. ಅಲ್ಲಿಗೆ ಒಬ್ಬರ ಆಟ ಮುಗಿಯಿತು. ಮನೆ ಬಿಟ್ಟು ಮನೆಯಲ್ಲಿ ಬೀಜವಿದ್ದರೆ ಎಷ್ಟು ಮನೆಗಳಲ್ಲಿದ್ದರೂ ಸವರಿ ತೆಗೆದುಕೊಳ್ಳಬಹುದು. ಎದುರು ಬದುರು ಮನೆಗಳು ಖಾಲಿಯಿದ್ದರೂ ಹೀಗೆ ಮಾಡಬಹುದು. 
ಒಂದು ಮನೆಯಲ್ಲಿ ನಾಲ್ಕು ಹರಳಿದ್ದರೆ ಅದಕ್ಕೆ ಕರುವೆಂದು ಹೆಸರು. ಅದನ್ನು ಆಯಾ ಆಟಗಾರರು ತೆಗೆದಿಟ್ಟುಕೊಳ್ಳಬಹುದು. 

ಚಿತ್ರ-1

ಹೀಗೆ ಕೊನೆಯಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಹರಳಿರುವ ತನಕವೂ ಆಡಬಹುದು. ಕೊನೆಯಲ್ಲಿ ಎಣಿಸಿ ನೋಡಿದಾಗ ಮೂವತ್ತೈದಕ್ಕಿಂತ ಕಡಿಮೆ ಇದ್ದರೆ ಅಷ್ಟೂ ಸೋತಂತೆ. ಹೆಚ್ಚಿದ್ದರೆ ಅಷ್ಟೂ ಗೆದ್ದಂತೆ. ಒಂದು ಮನೆಗೆ ಐದಕ್ಕಿಂತ ಕಡಿಮೆ ಬೀಜ ತುಂಬುವಂತಿಲ್ಲ. ಹೀಗೆ ಕೊನೆಯಲ್ಲಿ ತಮ್ಮ ಕಡೆ ಒಂದು ಮನೆಯನ್ನು ತುಂಬಲಾರದಾದಾಗ ಸಂಪೂರ್ಣ ಸೋಲು ಒಬ್ಬರಿಗೆ, ಸಂಪೂರ್ಣ ಗೆಲವು ಮತ್ತೊಬ್ಬರಿಗೆ.

6 ಆನೆ ಕುರಿ ಆಟ : ಚಿತ್ರದಲ್ಲಿ ತೋರಿಸುವಂತೆ ಬರೆದುಕೊಂಡು ಇಬ್ಬರಾಡುವ ಆಟ. ಇಂಥ ಮತ್ತು ಚಿತ್ರ 3ರ ರಂಥವನ್ನೂ ಕೆಲವು ಗ್ರಾಮದ ಮಾರಿ ಚಾವಡಿಗಳಲ್ಲಿ, ದೇವಸ್ಥಾನಗಳಲ್ಲಿ, ಮಂಟಪಗಳಲ್ಲಿ ಕೆತ್ತಿರುವುದನ್ನು ಈಗಲೂ ಕಾಣಬಹುದು. ಒಬ್ಬರು ಮೂರು ಆನೆಗಳನ್ನು ವಹಿಸಿಕೊಂಡರೆ ಒಬ್ಬರು ಇಪ್ಪತ್ತು ಕುರಿಗಳನ್ನು ವಹಿಸಿಕೊಳ್ಳಬೇಕು. ಆನೆ ಒಂದು ಕುರಿಯ ಮೇಲೆ ಮಾತ್ರ ನೆಗೆಯಬಲ್ಲದು. ನೆಗೆದರೆ ಆ ಕುರಿ ಆನೆಗೆ ಸೇರುತ್ತದೆ. 

ಚಿತ್ರ-2

ಜಾಗವಿದ್ದರೆ ಒಂದರ ತಪ್ಪ ಒಂದನ್ನು ಎಷ್ಟು ಸಾರಿ ಯಾವ ದಿಕ್ಕಿನಲ್ಲಿ ಬೇಕಾದರೂ ನೆಗೆಯಬಹುದು. ಕುರಿ ಆನೆಯ ಮೇಲೆ ನೆಗೆಯಲಾರದು. ಆದರೆ ನೆಗೆಯಲವಕಾಶ ಸಿಗದಂತೆ ಒಂದು ಕುರಿಯ ಮಗ್ಗಲು ಮನೆಯಲ್ಲಿ ಮತ್ತೊಂದು ಕುರಿಯಿರಬೇಕಷ್ಟೆ. ಹೀಗೆ ಆಡುತ್ತ ಅನೆ ನಡೆಯದಂತೆ ಮಾಡಬೇಕು. ಇಲ್ಲವೇ ಕುರಿಗಳು ಆನೆಗೆ ಆಹುತಿಯಾಗಬೇಕು. ನಡೆಸಲು ಮನೆಯಿದ್ದರೆ ನಡೆಸಲೇಬೇಕು. ನಡೆಸಲಾಗದಾದಾಗ ಸಂಬಂಧಪಟ್ಟವರು ಸೋತಂತೆ.

7 ಹುಲಿ ಕುರಿ ಆಟ : ಇಬ್ಬರಾಡುವ ಆಟ. ಒಬ್ಬ ಕುರಿ, ಮತ್ತೊಬ್ಬ ಹುಲಿ. ಹದಿನಾರು ಕುರಿಗಳು (ಸಣ್ಣಬೀಜಗಳು), ಎರಡು ಹುಲಿಗಳು (ದೊಡ್ಡಕಲ್ಲು) ಇರುತ್ತವೆ. ಆಟದ ಪ್ರಾರಂಭದಲ್ಲಿ ಒಳ ಎಂಟು ಮನೆಗೆ ಎಂಟು ಕುರಿ ಕೂಡಿಸಬೇಕು. ನಡುವೆ ಒಂದು ಹುಲಿ. ಹೊರಚೌಕದ ನಡುಗಟ್ಟಲು ಕುರಿ ಪ್ರಯತ್ನಿಸಬೇಕು. ಆನೆ ಕುರಿ ಆಟದಂತೆ ಹುಲಿಯಾಗಲಿ ಕುರಿಯಾಗಲಿ ಒಂದೇ ಏಟಿಗೆ ಎರಡರ ಮೇಲೆ ದಾಟುವಂತಿಲ್ಲ. ಒಂದೊಂದು ಸಾರಿಗೆ ಒಂದೊಂದರಂತೆ, ಸ್ಥಳವಿದ್ದರೆ ಎಷ್ಟರಮೇಲೆ ಬೇಕಾದರೂ ನೆಗೆಯಬಹುದು. ಹುಲಿ ನೆಗೆದರೆ ಕುರಿ ಸಾಯುತ್ತದೆ. ಹೀಗೆ ಆಡುತ್ತ ಯಾರಾದರೊಬ್ಬರು ಎದುರಿಸಲಾರದ ಸ್ಥಿತಿಗೆ ಬಂದಾಗ ಆಟ ಘಟ್ಟಕ್ಕೆ ಬರುತ್ತದೆ. ಅಂದರೆ ಹುಲಿಗೆ ನಡೆಯಲು ಜಾಗವಿಲ್ಲದಂತಾಗಬಹುದು. ಇಲ್ಲ ಎಲ್ಲ ಕುರಿಗಳನ್ನು ತಿಂದು ಹಾಕಬೇಕು. ಮತ್ತೆ ಮರು ಆಟ. 

ಚಿತ್ರ-3

8 ಚೌಕಬಾರ : ನಾಲ್ಕು ಜನ ಅಥವಾ ಇಬ್ಬರೋ ಮೂವರೋ ಆಡಬಹುದಾದ ಆಟ. ಚಿತ್ರ 4 ಮತ್ತು 5 ರಂತೆ ಐದು ಅಥವಾ ಏಳು ಮನೆಗಳ ಚೌಕ ಬರೆದುಕೊಳ್ಳಬೇಕು. ಐದರ ಮನೆಗೆ ನಾಲ್ಕು ಹುಣಸೇಬೇಳೆಗಳು ಅಥವಾ ಕವಡೆಗಳೂ ಏಳರ ಮನೆಗೆ ಆರು ಬೇಕು. ಹೊರಭಾಗದ ಮಧ್ಯದ ಮನೆಗಳು ಕಟ್ಟೆ ಮನೆಗಳು. ಇಲ್ಲಿ ಅಪಾಯವಿಲ್ಲ. ಮಧ್ಯದ ಮನೆ ಹಣ್ಣಿನ ಮನೆ. ಏಳರ ಮನೆ ಆಟದಲ್ಲಿ ಮೂಲೆಮೂಲೆಯ ಶೃಂಗಾಭಿಮುಖ ಮನೆ ಕಟ್ಟೆಮನೆ. 

ಚಿತ್ರ-4

ಈಗ ಯಾರಾದರೊಬ್ಬರು ಆಟ ಪ್ರಾರಂಭಿಸುತ್ತಾರೆ. ಅಲ್ಲಿಂದ ಮುಂದಕ್ಕೆ ಅವರ ಬಲಗಡೆ ಇರುವವರು ಆಡುವುದು ರೂಢಿ. ಹೊರಗಡೆ ಮನೆಗಳಲ್ಲಿ ಒಂದೇ ಕಾಯಿಗೆ ಅವಕಾಶ. ಕಟ್ಟೆಮನೆಗಳಿಗೆ ಈ ನಿಯಮವಿಲ್ಲ. ಬೇಳೆ ಬಿಡುವಾಗ ನಾಲ್ಕು ಅಂಗಾತ ಬಿದ್ದರೆ ಚೌಕವೆನ್ನುತ್ತಾರೆ. ಬೋರಲಾಗಿ ಬಿದ್ದರೆ ಬಾರ ಎನ್ನುತ್ತಾರೆ. ಇದೇ ಪ್ರಾಯಶಃ ಆಟದ ಹೆಸರು. ಪ್ರತಿಯೊಬ್ಬರೂ ನಡೆಸುತ್ತ ಒಂದು ಸುತ್ತು ಬಂದು ತಮ್ಮ ತಮ್ಮ ಮನೆಯ ಹಿಂದಿನ ಮನೆಯ ಮೂಲಕ ಒಳನುಗ್ಗಿ ಈಗ ಪ್ರದಕ್ಷಿಣೆಯಾಗಿ ಅನುಕೂಲವಾದ ರೀತಿಯಲ್ಲಿ ಬೇಳೆ ಬಿದ್ದರೆ ಹಣ್ಣು ಮಾಡುವವರು ಗೆದ್ದಂತೆ. ಕೊನೆಯಲ್ಲಿ ಉಳಿದವರು ಸೋತಂತೆ. 
ಈ ಆಟದಲ್ಲಿ ಕೆಲವು ನಿಬಂಧನೆಗಳನ್ನು ಮಾಡಿಕೊಳ್ಳುತ್ತಾರೆ. ಕಾಯಿ ಹೊಡೆದರೆ ಕೊಲೆ ಎಂದು ಹೆಸರು. ಕೊಲೆಯಾಗದ ಯಾರು ಒಳನುಗ್ಗಲು ಅವಕಾಶವಿಲ್ಲ. ಒಂದೇ ಕಾಯನ್ನು ಹೊರಗಡೆಯೇ ಸುತ್ತಿಸುತ್ತಿರಲು ಅವಕಾಶವಿಲ್ಲ. ಎಲ್ಲ ಕಾಯಿಗಳನ್ನು ನಡೆಸಿ ಗತ್ಯಂತರವಿಲ್ಲದಿದ್ದರೆ ಸುತ್ತಿಸಬೇಕು. ಒಂದೇ ಸಮನೆ ಮೂರು ಚೌಕವಾಗಲಿ, ಮೂರು ಬಾರವಾಗಲಿ ಬೀಳಬಾರದು. ಚೌಕ ಅಥವಾ ಬಾರ ಬಿದ್ದಾಗ ಅದರ ಕೈ ಉಂಟು. ಅಂದರೆ ಬೇಳೆ ಬಿಡಲು ಮತ್ತೊಂದು ಅವಕಾಶ. ಬೇಕಿಲ್ಲದಾಗ ಇಂಥ ಕೈ ಬೇಡ ಎನ್ನುವಂತಿಲ್ಲ. 

ಚಿತ್ರ-5

ಒಳಗಡೆ ಎರಡು ಕಾಯಿಗಳನ್ನು ಜೊತೆ ಕಟ್ಟಬಹುದು. ಅದಕ್ಕೆ ತಕ್ಕಂತೆ ಬೇಳೆ ಬೀಳಬೇಕು. ನಡೆಸಿದ ಮೇಲೆ ಅವು ಗಟ್ಟಿ ಜೊತೆ. ಒಂಟಿ ಅದನ್ನು ದಾಟಬಹುದೇ, ಜೊತೆ ಒಂಟಿಯನ್ನು ಹೊಡೆಯಬಹುದೇ, ಜೊತೆಯನ್ನು ಕೀಳಬಹುದೇ ಇತ್ಯಾದಿ ವಿಚಾರಗಳಲ್ಲಿ ಮೊದಲೇ ಒಪ್ಪಂದವಾಗಿರಬೇಕು. ಗೆದ್ದವರೆಲ್ಲ ಆಟದ ಬೇಳೆಗಳನ್ನು ಸರಿ-ಬೆಸ ಆಟದಂತೆ ಕ್ಯೆಯಲ್ಲಿ ಬಚ್ಚಿಟ್ಟುಕೊಂಡು ಎಷ್ಟು ಎಂದು ಕೇಳಿ, ತಪ್ಪು ಹೇಳಿದರೆ ಅಷ್ಟು ಗುದ್ದು ಎಂದು, ಎಣಿಸಿಕೊಂಡು ಸರಿಯಾಗಿ ಹೇಳಿದರೆ ಬೇಳೆಗಳನ್ನು ಕೊಟ್ಟಕೊನೆಯಲ್ಲಿ ಆದಷ್ಟು ಗುದ್ದುಗಳನ್ನು ಸೋತವನ ಕೈಮೇಲೆ ಕೊಡಬಹುದು. ಇದಿಲ್ಲದೆಯೇ ಮರು ಆಟ ಪ್ರಾರಂಭಿಸಬಹುದು. ಕೆಲವರು ಎಲ್ಲ ಕಾಯಿಗಳನ್ನೂ ಹಣ್ಣಿನ ಮನೆಯಲ್ಲಿಟ್ಟು ಕಾಯಿಸು ಎಂದು ಹೇಳಿ ಪಕ್ಕದಿಂದ ಸೋತವನ ಕೈಗೆ ಏಟು ಕೊಡುತ್ತಾರೆ. ಪ್ರತಿಸಾರಿಯೂ ಒಂದೊಂದು ಕಾಯಿ ಆತನಿಗೆ ದಕ್ಕುತ್ತದೆ. ಏಳರ ಮನೆ ಆಟವೂ ಇದೇ ರೀತಿ. ಎರಡೆರಡು ಮನೆ ಜಾಸ್ತಿ. ಎರಡು ಬೇಳೆ ಜಾಸ್ತಿ. ಎಲ್ಲ ಬೇಳೆಗಳೂ ಅಂಗಾತ ಬಿದ್ದರೆ ಆರು, ಮಗುಚಿಕೊಂಡರೆ ಹನ್ನೆರಡು ಇಷ್ಟೇ ವ್ಯತ್ಯಾಸ.

9 ಇಪ್ಪತ್ತರಾಟ : ಇದು ಇಬ್ಬರು ಅಥವಾ ಹೆಚ್ಚು ಜನ ಆಡುವ ಆಟ. ಇದಕ್ಕೆ ನಾಲ್ಕು ಹುಣಿಸೆ ಬೇಳೆಗಳೋ ಕವಡೆಗಳೋ ಸಾಕು. ಪ್ರತಿಯೊಬ್ಬರೂ ಸರದಿಯಂತೆ ಆಡಬೇಕು. ಯಾರದು ಸರಿಯಾಗಿ ಇಪ್ಪತ್ತಾಗುತ್ತದೋ ಅವರು ಗೆದ್ದಂತೆ. ಕೊನೆಯಲ್ಲಿ ಉಳಿಯುವವರು ಸೋತಂತೆ. ಗೆದ್ದವರು ಸರಿಬೆಸದಾಟದಂತೆ ಬೇಳೆಗಳನ್ನು ಬಚ್ಚಿಟ್ಟುಕೊಂಡು ತೋರಿಸಿ ಆದಷ್ಟು ಗುದ್ದುಗಳನ್ನು ಎಣಿಸಿಕೊಂಡು ಸೋತವನ ಕೈಯನ್ನು ನೆಲದಲ್ಲಿರಿಸಿ ಗುದ್ದಬಹುದು.

10 ಪಗಡೆ : ಇದಕ್ಕೆ ಚಿತ್ರದಲ್ಲಿ ತೋರಿಸಿರುವಂತೆ ಕಸೂತಿ ಹಾಕಿದ ಇಲ್ಲವೇ ಬಣ್ಣ ಬಣ್ಣದ ಬಟ್ಟೆಯಲ್ಲಿ ಹೊಲೆದ ಒಂದು ಹಾಸು ಬೇಕು. ಕೆಂಪು, ಕಪ್ಪು, ಹಸಿರು ಮತ್ತು ಹಳದಿಯ ಪುಟ್ಟ ಘಂಟೆಯ ಆಕಾರದ ಕಾಯಿಗಳು ಪ್ರತಿ ಬಣ್ಣಕ್ಕೆ ನಾಲ್ಕರಂತೆ ಹದಿನಾರು ಬೇಕು. ಕೆಂಪು ಕಪ್ಪು ಒಬ್ಬರಿಗೆ. ಹಳದಿ ಹಸಿರು ಒಬ್ಬರಿಗೆ. ದಂತದ ಅಥವಾ ಮೂಳೆಯ ಘನ- ಆಯಾತಾಕಾರದ ಎರಡು ದಾಳಗಳು ಬೇಕು. ಈ ದಾಳಗಳ ನಾಲ್ಕು ಕಡೆಯೂ ಒಂದು, ಮೂರು, ಆರು, ನಾಲ್ಕು ಈ ರೀತಿ ದಪ್ಪ ಚುಕ್ಕಿಗಳಿರುತ್ತವೆ. ದಾಳ ಬೀಳುವುದಕ್ಕೆ ಲೆತ್ತ ಅಥವಾ ಗರ ಎನ್ನುತ್ತಾರೆ. ಎರಡು ದಾಳಗಳಲ್ಲೂ ಒಂದು, ಒಂದು ಬಿದ್ದರೆ ದುಗ; ಮೂರು ಬಿದ್ದರೆ ಇತ್ತಿಗೆ; ಹೆಚ್ಚೆಂದರೆ ಹನ್ನೆರಡು; ಕಮ್ಮಿ ಎಂದರೆ ದುಗ; ತಮ್ಮ ತಮ್ಮ ಬಣ್ಣದ ಕಾಯಿಗಳನ್ನು ವಿರುದ್ಧ ದಿಕ್ಕಿನ ಮನೆಗಳಲ್ಲಿ ಎರಡೆರಡಾಗಿ, ಬಲಗಡೆ ಮಧ್ಯದ ಕಟ್ಟೆಮನೆಯಲ್ಲಿ ಎರಡು, ಮಧ್ಯದಲ್ಲಿ ಹಣ್ಣಿನ ಮನೆಯಿಂದ (ಕೇಂದ್ರ ದೊಡ್ಡಮನೆ) ಆರು ಮತ್ತು ಏಳನೆಯ ಮನೆಯಲ್ಲಿ ಒಂದೊಂದು ಹೀಗೆ ಇರಬೇಕು. ಈಗ ಯಾರಾದರೊಬ್ಬರು ಆಟ ಪ್ರಾರಂಭಿಸಿ ಲೆತ್ತ ಬೀಳಲು ಅಷ್ಟಕ್ಕೂ ಒಂದೇ ಬಣ್ಣದ ಕಾಯಿ ನಡೆಸಬೇಕು. ಹೀಗೆ ನಡೆಸುತ್ತ ಒಂದು ಪೂರ್ತಿ ಸುತ್ತು ಬಂದು ಮಧ್ಯದ ಮನೆಯಲ್ಲಿ ಒಳನುಗ್ಗಬೇಕು. ಹಣ್ಣಿನ ಕಾಯಿಗೆ ಗುರುತು ಕೆಂಪು ಮನೆಯಲ್ಲಿ ಅದು ಮಲಗಿಕೊಳ್ಳುವುದೇ. ಮೊದಲು ಎಲ್ಲ ಕಾಯಿಗಳನ್ನು ಹಣ್ಣು ಮಾಡಿದವರು ಗೆದ್ದರು.

ಚಿತ್ರ-6

ಚೌಕಬಾರದಂತೆ ಈ ಆಟದಲ್ಲೂ ಒಂಟಿ, ಜೊತೆ, ಅವುಗಳನ್ನು ಕಟ್ಟುವುದು, ಕೀಳುವುದು, ನಡೆಸುವುದು, ಹೊಡೆಯುವುದು ಈ ವಿಚಾರದಲ್ಲಿ ಮೊದಲೇ ಅಂಗೀಕರಿಸಿದ ನಿಯಮಗಳಿರುತ್ತದೆ. ಪಗಡೆಯಾಟ ಬಹು ಪ್ರಾಚೀನವಾದುದು.

11 ಚದುರಂಗ : ಇದು ಈಗ ಜಗತ್ಪ್ರಸಿದ್ಧವಾದ ಆಟ. ಆಟಗಳಲ್ಲೆಲ್ಲ ಬಹು ಬುದ್ಧಿವಂತಿಕೆ ಮತ್ತು ಏಕಾಗ್ರಚಿತ್ತದಿಂದ ಮಾತ್ರ ಸಾಧ್ಯವಾದ ಆಟ. ಇದಕ್ಕೆ ವಿಶೇಷವಾದ ಒಂದು ಮರದ ಅಥವಾ ರಟ್ಟಿನ ಹಾಸು ಇರುತ್ತದೆ. ಅದರಲ್ಲಿ ಒಂದು ಬಿಟ್ಟು ಒಂದು ಕಪ್ಪು ಮತ್ತು ಹಳದಿಯ ಮನೆಗಳು. ಹನ್ನೆರಡು ಅಂಗುಲ ಚೌಕಟ್ಟಿನಲ್ಲಿ ಸಾಲಿಗೆ ಎಂಟರಂತೆ ಎಂಟು ಸಾಲು ಒಟ್ಟು ಅರುವತ್ತುನಾಲ್ಕು ಮನೆಗಳು. ಆಡುವ ಇಬ್ಬರೂ ಹೇಗೆ ಬೇಕಾದರೂ ಎದುರು ಬದುರಾಗಿ ಕುಳಿತುಕೊಳ್ಳಬಹುದು. 
ಚದುರಂಗವೆಂದರೆ ಸೈನ್ಯದ ನಾಲ್ಕು ಅಂಗಗಳು (ಚತುರ್ ಅಂಗ), ಈ ಆಟದಲ್ಲಿ ಕಪ್ಪು ಮತ್ತು ಬಿಳುಪಿನ ಎರಡು ರಾಜ, ಎರಡು ಮಂತ್ರಿ, ಎರಡು ಒಂಟೆ, ಎರಡು ಕುದುರೆ, ಎರಡು ಆನೆ, (ಆನೆಯ ಪದ) ಮತ್ತು ಎಂಟೆಂಟರಂತೆ ಹದಿನಾರು ಜನ ಕಾಲಾಳುಗಳು. ಕಪ್ಪು ಕಾಯಿಗಳು ಒಬ್ಬರಿಗೆ, ಬಿಳಿಯ ಕಾಯಿಗಳು ಮತ್ತೊಬ್ಬರಿಗೆ. 
ನಡೆಸುವ ರೀತಿ : ಈ ಆಟದಲ್ಲಿ ರಾಜ, ಮಂತ್ರಿ ಮೊದಲಾದವರ ಚಲನವಲನ ಮತ್ತು ಆನೆ-ಕುರಿ ಹುಲಿ-ಕುರಿ ಆಟಗಳಲ್ಲಿ ವಿವರಿಸಿರುವಂತೆ ಮೇಲೆ ಹಾರುವ ರೀತಿಯಲ್ಲಿ ನಾನಾ ನಿಬಂಧನೆಗಳಿವೆ. ತಮ್ಮ ಚದುರಂಗ ಬಲವನ್ನು ಕಳೆದುಕೊಳ್ಳದೆ ಎದುರಾಳಿಯ ಚದುರಂಗ ಬಲವನ್ನು ನಾಶಪಡಿಸುವುದು ಇಲ್ಲವೆ ರಾಜ ಚಲಿಸದಂತೆ ಮಾಡುವುದೇ ಗೆಲ್ಮೆ. ಹೀಗೆ ಮಾಡಲು ಬುದ್ಧಿವಂತ ಆಟಗಾರರಿಗೆ ಮೂರು ಕಾಯಿಗಳೇ ಸಾಕು. ಅಡಿಯ ಹಿಂದಿಡೆ ನಾಕ ಎಂಬ ಉಕ್ತಿ ಈ ಆಟಕ್ಕೆ ಹೇಳಿಸಿಕೊಂಡದ್ದು. ಮೈಯೆಲ್ಲ ಕಣ್ಣಾಗಿ ಮನವೆಲ್ಲ ಕೈಯಾಗಿ ಕಾಯಿ ನಡೆಸಬೇಕು. ನಡೆಸಲಾರದವರೇ ಸೋಲುಂಡವರು. ವಿವರಗಳಿಗೆ (ನೋಡಿ- ಚದುರಂಗ). 

ಹೊರಾಂಗಣ ಆಟಗಳು : 

1 ಉಪೂಪೆಕಡ್ಡಿ : ಇದು ಪುಟ್ಟ ಮಕ್ಕಳ ಆಟ. ಇಬ್ಬರೇ ಆಟಗಾರರು. ಇದಕ್ಕೆ ಸುಮಾರು ಹತ್ತು ಹನ್ನೆರಡು ಅಂಗುಲದ ಪುಟ್ಟದೊಂದು ಮಣ್ಣಿನ ಅಥವಾ ಮರಳಿನ ಏರಿ ಮತ್ತು ಎರಡಂಗುಲ ಉದ್ದದ ದಬ್ಬಳದಂತೆ ಕಡ್ಡಿ-ಇಷ್ಟಿದ್ದರೆ ಸಾಕು. ಒಂದು ಮಗು ಕಡ್ಡಿಯನ್ನು ಆಚೆ ಇಚೆ ತುದಿಯಲ್ಲಿ ಹೆಬ್ಬೆರಳು ಮತ್ತು ತೋರುಬೆರಳುಗಳು ಮಧ್ಯ ಇಟ್ಟುಕೊಂಡು ಮತ್ತೊಂದು ಮಗು ನೋಡು ನೋಡುತ್ತಿದ್ದಂತೆಯೇ ಉಪಾಯವಾಗಿ ಏರಿಯನ್ನು ಎರಡು ಕೈಯಲ್ಲೂ ಮುಚ್ಚಿಕೊಂಡು ಆಡಿಸುತ್ತ ಕಡ್ಡಿಯನ್ನು ಬಚ್ಚಿಟ್ಟುಬಿಟ್ಟು ಕಡ್ಡಿ ಎಲ್ಲಿದೆ ಎಂದಾಗ ಮತ್ತೊಂದು ಮಗು ತನ್ನೆರಡು ಕೈಗಳ ಬೆರಳುಗಳನ್ನು ಒಂದಕ್ಕೊಂದು ಹೆಣೆದು ಮುಂಗೈಗಳು ಮೇಲಾಗುವಂತೆ ಕಟ್ಟಿ ಇರಬಹುದಾದ ಜಾಗವನ್ನು ಮುಚ್ಚಿಕೊಳ್ಳುತ್ತದೆ. ಅದನ್ನು ಬಚ್ಚಿಟ್ಟ ಮಗುವಿಗೆ ಗೊತ್ತಿರುವುದರಿಂದ ನಿಜವಾಗಿದ್ದರೆ ಒಪ್ಪಿಕೊಳ್ಳುತ್ತದೆ. ಇಲ್ಲದಿದ್ದರೆ ಆ ಜಾಗ ಬಿಟ್ಟು ಬೇರೆ ಜಾಗದಲ್ಲಿ ತೋರಿಸುತ್ತದೆ. ಇದರ ಮೇಲೆ ಆಟದಲ್ಲಿ ಸೋಲು ಗೆಲುವು. ಹೇಳುವ ಮಗು ಗೆದ್ದರೆ ಅದಕ್ಕೆ ಆಟ; ಸೋತರೆ ಅದರ ಕೈಗೆ ಬೊಗಸೆ ಮಣ್ಣಿತ್ತು ಮಧ್ಯಕ್ಕೆ ಅದಕ್ಕೆ ಅದೇ ಕಡ್ಡಿಯನ್ನು ನೆಟ್ಟು ಅದರ ಕಣ್ಣುಮುಚ್ಚಿಕೊಂಡು ಹತ್ತಾರು ಗಜ ದೂರ ಹೋಗಿ ಅಲ್ಲೆಲ್ಲೋ ಒಂದು ಕಡೆ ಅದನ್ನು ಹಾಕಿಸಿ, ವಾಪಸ್ಸು ಹಾಗೆಯೇ ಕರೆದು ಬಂದು ಮೊದಲಿನ ಸ್ಥಳದಲ್ಲಿ ಮೂರು ಸುತ್ತು ಸುತ್ತಿಸಿ ದಿಗ್‍ಭ್ರಮೆ ಬರುವಂತೆ ಮಾಡಿ ಕಣ್ಣು ಬಿಡಿಸುವುದು. ಆ ಮಗು ಈಗ ಹೋಗಿ, ಹುಡುಕಿ ಕಡ್ಡಿ ತರಬೇಕು. ಹುಡುಕಿದರೂ ಸಿಗದಿದ್ದಾಗ ಗೆದ್ದ ಮಗು ನಕ್ಕು, ಚಪ್ಪಾಳೆ ತಟ್ಟಿ ಕಡ್ಡಿ ತೋರಿಸಿ ಕೊಡುತ್ತದೆ.

2 ಕಣ್ಣಾಮುಚ್ಚಾಲೆ: ಇದನ್ನು ಅವಿತೇಗುಮ್ಮನಾಟವೆಂದೂ ಈಚೆಗೆ, ಕಣ್ಣು ಮುಚ್ಚುವ ಅಜ್ಜಿಗೆ ಬದಲಾಗಿ, ಹಿಡಿಯಬೇಕಾದವರು ಒಂದು ಕಡೆ ನಿಂತು, ತಮ್ಮ ಗೋಡೆಗೋ ಯಾವುದಕ್ಕೋ ಎದುರಾಗಿ ನಿಂತು ಮುಚ್ಚಿಕೊಂಡಿದ್ದು ಬಚ್ಚಿಟ್ಟುಕೊಂಡಿರುವವರನ್ನು ಕಂಡಾಗ ಕೂಗಿಕೊಳ್ಳುವ ಗುಲ್ಟಾರಿಯೋ ಎಂದೂ ಕರೆಯುವರು. ಇದೊಂದು ಸಾಮೂಹಿಕ ಆಟ. ಒಬ್ಬರು ಹಿಡಿಯುವವರ ಕಣ್ಣು ಮುಚ್ಚಲು ಅಜ್ಜಿ. ಆದ್ದರಿಂದ ಇದಕ್ಕೆ ಕಣ್ಣಾಮುಚ್ಚೆ, ಕಾಡೇಗೂಡು; ಉದ್ದಿನಮೂಡೆ, ಉರುಳೇಹೋಯ್ತು; ಹಾಲೇ ಕಂಬ ಹರಿದೇಹೋಯ್ತು; ನಮ್ಮ ಹಕ್ಕಿ ಬಿಟ್ಟೆನೋ ಬಿಟ್ಟೆ; ನಿಮ್ಮ ಹಕ್ಕಿ ಮುಚ್ಚಿಕೊಂಡು ಹೇಳಿ ತನ್ನ ಹಕ್ಕಿ ಬಿಡುತ್ತಾಳೆ. ಈ ಹಕ್ಕಿ ಬಚ್ಚಿಟ್ಟುಕೊಂಡಿರುವ ಹಕ್ಕಿಗಳನ್ನು ಹಿಡಿಯಬೇಕು. ಯಾವುದಾದರೂ ಬುದ್ಧಿವಂತ ಕಳ್ಳ ಹಕ್ಕಿ ಇದಕ್ಕೆ ಕಾಣದಂತೆ ಅಜ್ಜಿಯನ್ನು ಬಂದು ಮುಟ್ಟಿಸಿ ಬಿಟ್ಟರೆ, ಮತ್ತೆ ಹಿಡಿಯುತ್ತಿದ್ದ ಹಕ್ಕಿಯೇ ಕಣ್ಣುಮುಚ್ಚಿಸಿಕೊಂಡು ಹಿಡಿಯಬೇಕು. ಇಲ್ಲದೆ ಯಾವುದಾದರೂ ಒಂದು ಗುಪ್ತವಾಗಿದ್ದ ಹಕ್ಕಿಯನ್ನು ಕಂಡುಬಿಟ್ಟರೆ ಹೆಸರು ಹಿಡಿದು ಕೂಗಿ ಕಂಡೆ, ಕಂಡೆ ಎಂದು ಹಿಡಿದರಾಯಿತು. ಆ ಹಕ್ಕಿ ಈಗ ಕಣ್ಣುಮುಚ್ಚಿಕೊಳ್ಳಬೇಕು. ಮಕ್ಕಳು ಓಡೋಡಿ ಬಂದು ಅಜ್ಜಿಯನ್ನು ಮುಟ್ಟುವ ಚಿತ್ರ ಅದ್ಭುತ ರಮಣೀಯ.

3 ಕುಂಟಾಟ: ಇದು ಸಾಮಾನ್ಯವಾಗಿ ಚಿಕ್ಕ ಮಕ್ಕಳ ಆಟ. ಆಡುವವರೆಲ್ಲರೂ ಸೇರಿ ಒಂದು ಚೌಕವನ್ನು (ಆಟದ ಅಂಗಣ) ಬರೆದುಕೊಳ್ಳುತ್ತಾರೆ. ಯಾರಾದರೊಬ್ಬರು ಹಿಡಿಯಬೇಕು. ಎಲ್ಲರೂ ಸೇರಿ ಒಟ್ಟಿಗೆ ಚಪ್ಪಾಳೆ ಹಾಕಿ ಕೈಯಿಟ್ಟು ತೋರಿಸಿ ಯಾರ ಎರಡು ಕೈಗಳು ಒಂದರ ಮೇಲೊಂದಿಟ್ಟಾಗ ಭಿನ್ನವಾಗಿರುತ್ತದೋ ಅವರು ಹಿಡಿಯಬೇಕು. ಒಬ್ಬರು ಈ ರೀತಿ ಸಿಕ್ಕುವತನಕ ಚಪ್ಪಾಳೆ ತಟ್ಟುತ್ತಿರುತ್ತಾರೆ. ಸಿಕ್ಕಿದವರು ಕುಂಟುತ್ತ ಕುಂಟುತ್ತ ಚೌಕಟ್ಟಿನೊಳಗೆ ಬಾಕಿಯವರನ್ನು ಹಿಡಿಯಬೇಕು. ಕಾಲು ಬಿಡಕೂಡದು. ಸುಸ್ತಾದಾಗ ಸಮಯಾವಕಾಶ ಕೇಳಬಹುದು. ಮೊದಲು ಸಿಕ್ಕಿಬಿದ್ದವರು ಮುಂದಕ್ಕೆ ಕುಂಟಿಕೊಂಡು ಹಿಡಿಯಬೇಕು. 
ಎಲ್ಲೆ ಬಿಟ್ಟು ಹೊರಹೋದವರೂ ಸಿಕ್ಕಿಬಿದ್ದಂತೆ ಭಾವನೆ.

4 ಕುಂಟುವ ಬಿಲ್ಲೆ: ಸಾಮಾನ್ಯವಾಗಿ ಹೆಣ್ಣು ಮಕ್ಕಳ ಆಟ. ಚೌಕವಾಗಿ ನಾಲ್ಕು, ಆರು, ಎಂಟು ಹೀಗೆ ತಮಗೆ ಅನುಕೂಲವಾದಂತೆ ಮನೆಗಳನ್ನು ಎರಡು ಸಾಲಾಗಿ ಬರೆದುಕೊಳ್ಳಬೇಕು. ಹೆಂಚಿನ ಅಥವಾ ಮಡಕೆಯ ಚೂರೊಂದನ್ನು ವೃತ್ತಾಕಾರವಾಗಿ ಸಮೆದು ಬಚ್ಚವನ್ನಾಗಿ ಮಾಡಿಕೊಂಡು ಅದನ್ನು ಅನುಕ್ರಮವಾಗಿ ಮೊದಲನೆ ಮನೆ ಎರಡನೆ ಮನೆ ಹೀಗೆ ಇಟ್ಟುಕೊಂಡು ಕುಂಟಬೇಕು. ಈ ಬಚ್ಚವನ್ನು ಹಣೆಯಮೇಲೆ ಇಟ್ಟುಕೊಂಡು ಸರಿಯೋ ಎಂದುಕೊಂಡು ಕಡೆಗೆ ಹೋಗಿ ಮನೆಗಳನ್ನು ನೋಡದೆ ಬಚ್ಚವನ್ನು ಹಿಂದಕ್ಕೆ ಯಾವುದಾದರೊಂದು ಮನೆಗೆ ಸರಿಯಾಗಿ ಬಿದ್ದರೆ ಅದು ಅವರ ಮನೆ. ಮುಂದೆ ಮತ್ತೊಬ್ಬರ ಆಟ. ಮೊದಲು ಆಡಿದಂತೆ ತಾವೂ ಆಡಿದರೆ ಅವರಿಗೂ ಒಂದು ಮನೆ ದಕ್ಕುತ್ತದೆ. ಹೀಗೆ ಮನೆಗಳನ್ನು ಗೆಲ್ಲುತ್ತ ಹೋದಾಗ ಹೆಚ್ಚು ಮನೆ ಗೆದ್ದವರು ಅಥವಾ ಇನ್ನೊಬ್ಬರು ಹೋಗದಂತೆ ಮಾಡಿದವರು ಗೆದ್ದಂತೆ.

5 ಕಾಚಿಕೋಲ್ ಬಂದಿಕೋಲ್: ಇದು ಈಗಿನ ಸಂಗೀತ ಕುರ್ಚಿ (ಮ್ಯೂಸಿóಕಲ್ ಚೇರ್) ಇದ್ದಂತೆ. ಆಡುವ ಜನರ 
ಸಂಖ್ಯೆಗಿಂತ ಒಂದು ಕಡಿಮೆ ಇರುವಷ್ಟು ಕುರ್ಚಿಗಳನ್ನು ವೃತ್ತಾಕಾರವಾಗಿ ಇಟ್ಟು ಅದರ ಮೇಲೆ ಎಲ್ಲರೂ ಕೂಡುತ್ತಾರೆ. ಕುರ್ಚಿ ಇಲ್ಲದವರು ಜಾಗ ಹುಡುಕುತ್ತ ಸುತ್ತು ಹಾಕುತ್ತಿರುತ್ತಾರೆ. ಅವನ ಕಣ್ಣು ತಪ್ಪಿಸಿ ಉಳಿದವರು ತಮ್ಮ ತಮ್ಮ ಸ್ಥಳ ಬದಲಾಯಿಸುತ್ತಿರುತ್ತಾರೆ. ಖಾಲಿ ಕುರ್ಚಿ ಕಂಡೊಡನೆ ಓಡುವವ ಅಲ್ಲಿ ಹೋಗಿ ಕೂತುಬಿಡುತ್ತಾನೆ. ಜಾಗ ಸಿಗದವ ಸೋತು ಸುತ್ತು ತಿರುಗುತ್ತಾನೆ. ಕುರ್ಚಿಯ ಬದಲು ನೆಟ್ಟ ಕಂಬಗಳನ್ನು ಬಳಸಬಹುದು.

6 ರತ್ತೋ ರತ್ತೋ: ಇದು ಹೆಣ್ಣು ಮಕ್ಕಳ ಆಟ. ಆಡುವವರೆಲ್ಲ ವೃತ್ತಾಕಾರವಾಗಿ ಒಬ್ಬರಿಗೊಬ್ಬರು ಕೈ ಕಟ್ಟಿಕೊಂಡು ರತ್ತೋ ರತ್ತೋ ರಾಯನ ಮಗಳೇ, ಬಿತ್ತೋ ಬಿತ್ತೋ ಭೀಮನ ಮಗಳೇ, ಹದಿನಾರೆಮ್ಮೆ ಕಾಯಲಾರೆ, ಕರೆಯಲಾರೆ, ಕಾಸಲಾರೆ, ಕುಕ್ಕುರುಲ ಬಸವಿ, ಕೂರು ಬಸವಿ ಎಂದಕೂಡಲೇ ಎಲ್ಲರೂ ತತ್‍ಕ್ಷಣವೇ ಕುಳಿತುಕೊಳ್ಳಬೇಕು. ಕೊನೆಯಲ್ಲಿ ಕುಳಿತವಳು ಸೋತಂತೆ. ಈಗ ಅವಳನ್ನು ಮಧ್ಯದಲ್ಲಿ ನಿಲ್ಲಿಸಿಕೊಂಡು. ಉಳಿದವರೆಲ್ಲರೂ ವೃತ್ತಾಕಾರವಾಗಿ ಮೊದಲಿನಂತೆ ಒಬ್ಬರಿಗೊಬ್ಬರು ಕೈ ಕಟ್ಟಿಕೊಂಡು ಮೊದಲು ಹೇಳಿದಂತೆ ಹೇಳುತ್ತ ಸುತ್ತಲೂ ತಿರುಗಬೇಕು. ಕೊನೆಯಲ್ಲಿ ಕೂರು ಬಸವಿ ಎಂದು ಎಲ್ಲರೂ ಅವಳ ತಲೆಯ ಮೇಲೆ ಕೈಯಿಟ್ಟು ಬಲಾತ್ಕಾರವಾಗಿ ಕುಕ್ಕುರಿಸುವಂತೆ ಮಾಡುತ್ತಾರೆ. ಇದೇ ಆಟವನ್ನು ಬೇರೆ ರೀತಿಯಲ್ಲೂ ಆಡುತ್ತಾರೆ.

7 ಟೋಪಿಯಾಟ: ಸಾಮಾನ್ಯವಾಗಿ ಗಂಡು ಮಕ್ಕಳ ಆಟ. ಶಾಲೆಗಳಲ್ಲಿ ಆಡಿಸುವುದುಂಟು. ಆಡುವವರೆಲ್ಲರೂ ವೃತ್ತಾಕಾರವಾಗಿ ಸುಖಾಸನ ಹಾಕಿಕೊಂಡು ಒಳಮುಖವಾಗಿ ಕುಳಿತುಕೊಳ್ಳಬೇಕು. ಯಾರಾದರೊಬ್ಬರು ತಮ್ಮ ಟೋಪಿಯನ್ನೊ ಅಥವಾ ಹುರಿಯಾಗಿ ಮಾಡಿ ಮಡಿಸಿ ಹಗ್ಗದಂತೆ ಮಾಡಿದ ಟವಲನ್ನೊ ಕೈಯಲ್ಲಿ ಹಿಡಿದುಕೊಂಡು ಕುಳಿತಿರುವವರ ಹಿಂದುಗಡೆ ಕೈಗೆ ನಿಲುಕುವಂತೆ ಅದನ್ನು ಇಡಬೇಕು. ಬೆನ್ನಹಿಂದೆ ಇದೆ ಎನ್ನುವುದು ಅವನಿಗೆ ತಿಳಿದೇ ಇರುವುದಿಲ್ಲ. ಇಟ್ಟವನು ಒಂದು ಸುತ್ತು ಓಡಿಬಂದು ಕೂತವನ ಬೆನ್ನಮೇಲೆ ಟೋಪಿಯಿಂದ ಏಟುಕೊಡಲು ಪ್ರಾರಂಭಿಸುತ್ತಾನೆ. ಏಟು ತಿನ್ನುವವ ಒಂದು ಸುತ್ತು ಓಡಿಬಂದು ತನ್ನ ಜಾಗದಲ್ಲಿ ಕೂಡಬೇಕು. ಆಟ ಮುಂದುವರಿಯುತ್ತದೆ. ಚುರುಕಾದವ ತನ್ನ ಬೆನ್ನ ಹಿಂದಿರುವ ಟೋಪಿಯನ್ನು ಗುರುತಿಸಿ ಕೈಗೆ ತೆಗೆದುಕೊಂಡು ಇಟ್ಟವನನ್ನು ಅಟ್ಟಿ ಹೋಗುತ್ತಾನೆ. ಇಟ್ಟವ ಹೊಡೆತ ತಿಂದು ಅಥವಾ ಅದರಿಂದ ತಪ್ಪಿಸಿಕೊಂಡು ಒಂದು ಸುತ್ತು ಓಡಿ, ಎದ್ದವನ ಜಾಗದಲ್ಲಿ ಕೂಡಬೇಕು.

8 ಮರಕೋತಿ ಆಟ: ಇದಂತೂ ಗಂಡುಮಕ್ಕಳಾಟ. ಆಡುವವರೆಲ್ಲ ಒಂದು ಮರವನ್ನು ಏರಿ ಕೋತಿಗಳಂತೆ ಕುಳಿತುಕೊಳ್ಳುತ್ತಾರೆ. ಹಿಡಿಯುವವನೊಬ್ಬ ಆಮೇಲೆ ಮರವನ್ನೇರಿ ಹಿಡಿಯಬೇಕು. ಆಗ ಪ್ರತಿಯೊಬ್ಬನೂ ಸಿಕ್ಕಂತೆ ರೆಂಬೆಯಿಂದ ರೆಂಬೆಗೆ ಹಾರುತ್ತ ಹೋಗುತ್ತಾನೆ. ಕೋತಿಯಂಥ ಚಟುವಟಿಕೆ, ಮರ ಹತ್ತುವುದರಲ್ಲಿ ನೈಪುಣ್ಯ ಇದ್ದವರಿಗೆ ಈ ಆಟ. ಮೊದಲು ಸಿಕ್ಕಿದವನು ಈ ಸಾರಿ ಹಿಡಿಯುವವನಾಗಬೇಕು. ಹೀಗೆ ಆಟ ಮುಂದುವರಿಯುತ್ತದೆ.

9 ಗೋಲಿಯಾಟ : ಗಂಡುಮಕ್ಕಳ ಆಟ. ನೆಲದಲ್ಲಿ ಒಂದು ಗುಳಿ ತೋಡಿ (ಬದ್ದು ಮಾಡಿಕೊಂಡು) ಆಡುವುದು ಒಂದು ಬಗೆ. ಎಲ್ಲರೂ ನಿಗದಿಯಾದ ದೂರದಿಂದ ಬದ್ದಿನ ಕಡೆಗೆ ಗೋಲಿಬಿಡಬೇಕು. ಒಂದೇ ಎಸೆತಕ್ಕೆ ಗೋಲಿಯನ್ನು ಬದ್ದಿಗೆ ತುಂಬಿದವರು ಗೆದ್ದಂತೆ, ಹೀಗೆ ಗೋಲಿ ಎಸೆದಾಗ ಬದ್ದಿಗೆ ಅತಿ ಹತ್ತಿರವಿರುವ ಗೋಲಿ ಕುಳ್ಳಿ, ಅತಿ ದೂರವಿರುವ ಗೋಲಿ ಗಟ್ಟಿ. ಒಪ್ಪಂದದಂತೆ ಗಟ್ಟಿ ಗೋಲಿಯವನೋ ಕುಳ್ಳಿ ಗೋಲಿಯವನೋ ಮೊದಲು ಆಡಬೇಕು. ಆತನು ಬದ್ದು ತುಂಬಬೇಕು. ಮತ್ತೆ ಹೊಡೆಯಬೇಕು. ಹೀಗೆ ಆಡುವಾಗ ಎಲ್ಲಿ ತಪ್ಪಿದರೂ ಅವನ ಆಟ ಅಲ್ಲಿಗೆ ನಿಲ್ಲುತ್ತದೆ. ಮತ್ತೆ ಮುಂದಿನ ಕುಳ್ಳಿ ಅಥವಾ ಗಟ್ಟಿ ಗೋಲಿಯವನ ಆಟ. ಹೀಗೆ ಮೊದಲು ಹತ್ತು ಮಾಡಿದವನು ಗೆದ್ದಂತೆ. ಒಬ್ಬ ಹತ್ತು ಮಾಡಿಬಿಟ್ಟರೆ, ಬಾಕಿಯವರ ಲೆಕ್ಕವೆಲ್ಲ ವಜಾ ಆದಂತೆ, ಅವರು ಮತ್ತೆ ಮೊದಲಿನಿಂದ ಆಡಬೇಕು. ಹೀಗೆ ಕೊನೆಯಲ್ಲುಳಿಯುವವನೇ ಸೋತವ.

ಹೀಗೆ ಸೋತವ ತನ್ನ ಗೋಲಿಯನ್ನು ನಿಗದಿಯಾದ ದೂರದಿಂದ ಬದ್ದಿನ ಕಡೆಗೆ ಎಸೆದು ತುಂಬಲು ಪ್ರಯತ್ನಿಸಬೇಕು. ತುಂಬಿದರೆ ಮೊದಲು ಗೆದ್ದವನಿಗೆ ಆಟ ಕೊಟ್ಟಂತಾಯಿತು, ಮತ್ತೆ ಎರಡನೆಯವನಿಗೆ. ಆದರೆ ಗೋಲಿ ಬದ್ದಿಗೆ ಬೀಳದಿದ್ದರೆ ಗೆದ್ದವನು ಬದ್ದಿನ ಹತ್ತಿರದಿಂದ ಸೋತವನ ಗೋಲಿಯನ್ನು ಹೊಡೆದು ದೂರ ಓಡಿಸುತ್ತಾನೆ. ಅದನ್ನು ಸೋತವನ ಒಪ್ಪಂದದಂತೆ ಬೆರಳುಗಳಿಂದಲೋ ಮೊಳಕೈಯಿಂದಲೋ ದೇಕ (ತಳ್ಳ) ಬೇಕು. ಬದ್ದು ತುಂಬಲು ಯತ್ನಿಸಬೇಕು. ತುಂಬಿದರೆ ಗೆದ್ದ: ಇಲ್ಲದಿದ್ದರೆ ಮತ್ತೆ ಹೊಡೆತ; ಮತ್ತೆ ದೇಕೋಣ. ಹೀಗೆ ಸೋತವ ಗೆದ್ದವರೆಲ್ಲರಿಗೂ ಗೋಲಿಯನ್ನು ಬಿಟ್ಟು (ಎಸೆದು) ದೇಕಿ ಬದ್ದು ತುಂಬಿ ಆಟ ಕೊಡಬೇಕು. 

ಈ ಆಟದಲ್ಲಿ ಅನೇಕ ಪ್ರಕಾರಗಳಿವೆ. ಎಣಿಕೆಗೆ ಬದಲಾಗಿ ಹೊನ್ನಗನ್ನೆ, ಹೊನ ಕೆರಡು, ಬಂಗಲಿ, ಬಾಲ ಇತ್ಯಾದಿಯಾಗಿಯೂ ಎಕ್ಕಲ್‍ಗಾಜ, ಡಬ್ಬೀರಾಜ, ತೀನಂ ತಿರ್ಪು-ಹೀಗೆ ನಾಲ್ಕು, ಏಳು ಅಥವಾ ಹತ್ತರತನಕ ಎಣಿಸುತ್ತಾರೆ. ಗೋಲಿಗೆ ಬದಲಾಗಿ ಗುಂಚಿಯನ್ನು (ಗುಂಡನೆಯ ಗೂರ್ಚಿಕಲ್ಲು) ಉಪಯೋಗಿಸುವುದುಂಟು. ಬದ್ದಿಗೆ ಬದಲಾಗಿ ಪುಟ್ಟ ಚೌಕ ಬರೆದು ತಮ್ಮ ತಮ್ಮದಾಗಿ ಒಂದೊಂದು ಗೋಲಿಯನ್ನು ಪಣವಾಗಿಟ್ಟು ದೂರದಿಂದ ಅದನ್ನು ಹೊಡೆದು ಚೌಕದಿಂದ ಆಚೆಗೆ ತಳ್ಳಿ ಗೆದ್ದುಕೊಳ್ಳುವುದು-ಹೀಗೆ ನಿಯಮಗಳನ್ನು ಬದಲಾವಣೆ ಮಾಡಿಕೊಂಡು `ಪೆಯಿಂದ ಮುಂತಾಗಿ ಹೆಸರಿಟ್ಟುಕೊಂಡು ಆಡುವುದೂ ಉಂಟು.

10 ಗಜ್ಜುಗದಾಟ: ಈ ಆಟಕ್ಕೆ ಹೆಚ್ಚು ಗಜ್ಜುಗಗಳು ಮತ್ತು ಒಂದೊಂದು ಬಚ್ಚ (ಅಥವಾ ಗುಂಚಿ) ಬೇಕು. ಆಯತಾಕಾರವಾಗಿಯೋ ಅಂಡಾಕಾರವಾಗಿಯೋ ಮನೆಯೊಂದನ್ನು ಬರೆದುಕೊಂಡು ಆಡುವವರೆಲ್ಲರೂ ಒಬ್ಬೊಬ್ಬರಿಗೆ ಒಂದೊಂದು ಬಡ್ಡಿ (ಮೂರು ಗಜ್ಜುಗದ ಮೇಲೆ ಒಂದು) ಗಜ್ಜುಗಗಳನ್ನು ಅದರಲ್ಲಿ ಇಡಬೇಕು. ನಿಗದಿಯಾದ ದೂರದಿಂದ ಗಜ್ಜುಗಳತ್ತ ಬಚ್ಚ ಎಸೆಯಬೇಕು. ಹೀಗೆ ಎಸೆದಾಗ ಆ ಏಟಿಗೆ ಗಜ್ಜುಗ ಈಚೆಗೆ ಹಾರಿದರೆ ಬಳಿ ಹೊಡೆದಂತಾಯ್ತು. ಎಲ್ಲೆಯ ಗೀರಿನ ಮೇಲೆ ಬಿದ್ದರೆ ಬಿದ್ದಷ್ಟು ಗಜ್ಜುಗಗಳನ್ನು ವಟ್ಟ ಕೊಡಬೇಕು. ಗಜ್ಜುಗ ಅಲುಗಾಡಿದರೆ ಜುಮ್ಮಿ ಮಾಡಿಕೊಂಡಂತೆ. ಅಂಥವನಿಗೂ ಮೊದಲಾಟವುಂಟು. ಆದರೆ ಹಳೀ ಹೊಡೆದವನಿದ್ದರೆ ಆತನಿಗೆ ಮೊದಲ ಅವಕಾಶ. ಇಂಥವರು ಯಾರೂ ಇಲ್ಲದಿದ್ದರೆ ಒಪ್ಪಂದದ ಪ್ರಕಾರ ಗಟ್ಟಿ ಅಥವಾ ಕುಳ್ಳಿ ಬಚ್ಚದವರಿಗೆ ಮೊದಲಾಟ. ಹೀಗೆ ಬಚ್ಚದಿಂದ ಹೊಡೆದು ಹೊರ ಹೊರಡಿಸಿದ ಗಜ್ಜುಗಗಳು ಗೆದ್ದವನಿಗೆ ಲಾಭ. ಕಳೆದುಕೊಂಡವನಿಗೆ ನಷ್ಟ. ಈ ಆಟದ ನಿಬಂಧನೆಗಳು ಬೇರೆ ಬೇರೆ ಕಡೆ ಬೇರೆ ಬೇರೆಯಾಗಿರುತ್ತವೆ.

11 ಚೆಂಡಾಟ: ಇದರಲ್ಲಿ ಅನೇಕ ಆಟಗಳಿವೆ. ಲಗ್ಗೆಚೆಂಡು ಗಂಡು ಮಕ್ಕಳ ಆಟ. ಇದಕ್ಕೆ ಚಪ್ಪಟೆಯಾದ ಸುಮಾರು ಎಂಟು ಹತ್ತು ಅಂಗುಲ ಆಯಾತಾಕಾರದ ಕಲ್ಲು (ಇದೇ ಲಗ್ಗೆ) ಮತ್ತು ಆಡಲು ಒಂದು ಹಳೇ ಅರಿವೆಯನ್ನು ಪಟ್ಟಿ ಪಟ್ಟಿಯಾಗಿ ಹರಿದು ಸುತ್ತಿ ಬಿಚ್ಚಿಕೊಳ್ಳದಂತೆ ಹೊಲೆದ ಚೆಂಡು-ಇಷ್ಟು ಸಾಕು. ಕಲ್ಲು ಸಿಗದಿದ್ದರೆ ಹೆಂಚಿನ ಅಥವಾ ಒಡೆದ ಮಡಕೆಯ ಚೂರುಗಳನ್ನು ಒಂದರ ಮೇಲೊಂದಿಟ್ಟು ಸುಮಾರು ಐದಾರು ಅಂಗುಲ ಎತ್ತರ ಬರುವಂತೆ ಪೇರಿಸಿದರೂ ಲಗ್ಗೆಯಾಗುತ್ತದೆ. ಆಡುವವರೆಲ್ಲ ಸಮನಾಗಿ ಎರಡು ಗುಂಪಾಗುತ್ತಾರೆ: ಈಗಿನ ಕ್ರಿಕೆಟ್ ಆಟದಂತೆ ಲಗ್ಗೆಗೆ ಹೊಡೆಯುವವರು ಒಂದು ಗುಂಪು. ಲಗ್ಗೆ ಕಾಯ್ದುಕೊಂಡಿದ್ದು ಚೆಂಡೇನಾದರೂ ಪುಟವೆದ್ದು ಬಂದರೆ ಆನುವವರು ಒಂದು ಗುಂಪು. ಪ್ರತಿಯೊಬ್ಬರಿಗೂ ಮೂರು ಅವಕಾಶ. ಅಕಸ್ಮಾತ್ ಚೆಂಡನ್ನು ಆತುಬಿಟ್ಟರೆ ಮೊದಲ ಎಸೆತವಾಗಿದ್ದರೂ ಲಗ್ಗೆ ಬಿದ್ದಿದ್ದರೂ ಆಟ ಹೋಯಿತು. ಮುಂದಿನವನಿಗೆ ಆಟ.
ಲಗ್ಗೆ ಬಿದ್ದು ಚೆಂಡು ಹಾಕಲು ಸಿಗದೆ ಹೋದರೆ ಲಗ್ಗೆ ಬೀಳಿಸಿದ ಪಂಗಡ ಚೆಂಡನ್ನು ಅವಿತಿಟ್ಟುಕೊಳ್ಳುತ್ತಾರೆ. ಯಾರಲ್ಲಿದೆ ಎಂಬುದು ಅವರಿಗೆ ಮಾತ್ರ ಗೊತ್ತು. ಆದರೆ ಪ್ರತಿಯೊಬ್ಬನೂ ಚೆಂಡಿರುವವನಂತೆ ನಟಿಸಿ ಲಗ್ಗೆ ಕಾಯುತ್ತಿದ್ದ ಗುಂಪಿನವರನ್ನು ಹರತೋ ಹರತೋ ಎಂದು ಕೂಗುತ್ತ ಹೊಡೆಯಲು ಅಟ್ಟಿಸಿಕೊಂಡು ಹೋಗುತ್ತಾನೆ. ಚೆಂಡು ಹೊಡೆದು ಯಾರಿಗಾದರೂ ತಗುಲಿದರೆ ಮತ್ತೆ ಅವಿತಿಟ್ಟುಕೊಳ್ಳುವುದು. ತಗುಲದಿದ್ದರೂ ಚೆಂಡಿಲ್ಲದವನನ್ನು ಯಾರಾದರೂ ಮುಟ್ಟಿಸಿ ಕೊಂಡುಬಿಟ್ಟರೂ ಎಚ್ಚರಿಕೆಯಿಂದ ಮರೆಯಲ್ಲೋಡಿ ಬಂದು ಲಗ್ಗೆಯನ್ನು ಮೊದಲಿದ್ದಂತೆ ಒಡ್ಡಿದರೂ ಗೆದ್ದಂತೆ. ಆಗ ಕಾಯುತ್ತಿದ್ದವರು ಲಗ್ಗೆ ಹೊಡೆದವರಾಗುತ್ತಾರೆ. ಹೊಡೆಯುತ್ತಿದ್ದವರು ಲಗ್ಗೆ ಕಾಯುತ್ತಾರೆ. ಹರತೋ ಎಂದು ಕೂಗಿಕೊಂಡು ಅಟ್ಟಿಸಿಕೊಂಡು ಹೋಗುವುದರಿಂದ ಇದಕ್ಕೆ ಹರತೋ ಚೆಂಡು ಎಂದೂ ಹೆಸರು.

(i) ಸಿಕ್ಕಿದವರಿಗೆ ಸಿಕ್ಕುಪಾಲು : ಎರಡು ಪಂಗಡ ಮಾಡಿಕೊಳ್ಳದೆ ಯಾರು ಬೇಕಾದರೂ ಲಗ್ಗೆ ಬೀಳಿಸಿ, ಆಡುವ ಲಗ್ಗೆಚೆಂಡಿನ ಒಂದು ಪ್ರಭೇದಕ್ಕೆ ಈ ಹೆಸರಿದೆ.

(ii) ಕುದುರೆಚೆಂಡು : ಈ ಆಟದಲ್ಲೂ ಎರಡು ಪಂಗಡ, ಇಲ್ಲಿ ಲಗ್ಗೆಗೆ ಬದಲಾಗಿ ಎರಡು ಕಲ್ಲುಗಳ ಮೇಲೆ ಒಂದು ಅಡ್ಡಕಡ್ಡಿ. ನಿಗದಿಯಾದ ದೂರದಿಂದ ಚೆಂಡನ್ನು ಅದರಡಿ ನೇರವಾಗಿ ಎಸೆದು ಕಡ್ಡಿಯನ್ನು ಬೀಳಿಸಬೇಕು. ಬೀಳದಿದ್ದರೆ ಚೆಂಡನ್ನು ಹೊಡೆಯುತ್ತಿರುವ ಪಂಗಡಕ್ಕೆ ಒಬ್ಬನನ್ನು ಕುದುರೆಯಾಗಿ ಕಳುಹಿಸಬೇಕು. ಆಟದ ವಿವರ ಹೀಗೆ: ಒಂದು ಗುಂಪಿನವರು ಅಡ್ಡಕಡ್ಡಿಯ ಹತ್ತಿರ ನಿಂತುಕೊಂಡು ಒಬ್ಬೊಬ್ಬರೂ ಮೂರು ಮೂರು ಅವಕಾಶದೊಳಗೆ ದಾಂಡಿನಿಂದ (ಇದನ್ನು ಗಾರು ಎಂತಲೂ ಕರೆಯುತ್ತಾರೆ) ಚೆಂಡನ್ನು ಕಾಯುವವರತ್ತ ಬಾರಿಸಬೇಕು. ದಂಡನ್ನು ಒಂದು ಸಾರಿ ಬೀಸಿ ಚೆಂಡಿಗೆ ತಾಗದಿದ್ದರೂ ಆ ಅವಕಾಶ ಮುಗಿದಂತೆ. ಹೊಡೆದೂ ಅದನ್ನು ಎದುರಾಳಿಗಳು ಆತುಕೊಂಡುಬಿಟ್ಟರೆ ಆಯಿತು. ಇಲ್ಲದಿದ್ದರೆ ಹೊಡೆದ ಚೆಂಡನ್ನು ಹಿಡಿದು ಗುರಿಗೆ ಹೊಡೆದು ಅಡ್ಡಗಡ್ಡಿಯನ್ನು ಬೀಳಿಸಿದರೂ ಅಥವಾ ಅದರಡಿ ಚೆಂಡು ನುಗ್ಗಿಸಿಬಿಟ್ಟರೂ ಹೊಡೆಯುತ್ತಿರುವ ಪಂಗಡದವರಿಗೆ ಒಬ್ಬ ಆಟಗಾರನನ್ನು ಕುದುರೆಯಾಗಿ ಕಳುಹಿಸಬೇಕು. ಹೊಡೆಯುವವರಲ್ಲಿ ಒಬ್ಬ ಅವನ ಬೆನ್ನ ಮೇಲೇರಿ ಕುಳಿತುಕೊಳ್ಳುತ್ತಾನೆ. ಹೀಗೆ ಮತ್ತೆ ಅಡ್ಡಕಡ್ದಿ ಬೀಳಿಸುವ ತನಕವೂ ಆತ ಕುದುರೆಯಾಗಿರಬೇಕು. ಕೆಲವು ಸಾರಿ ಇಂಥ ಕುದುರೆಗಳ ಸಾಲೇ ಇರುತ್ತದೆ. ಚೆಂಡನ್ನು ಯಶಸ್ವಿಯಾಗಿ ಗುರಿ ಮುಟ್ಟಿಸಿದಾಗ ಈ ಕುದುರೆಗಳು ಸವಾರನನ್ನು ಎತ್ತಿಹಾಕಿ ಓಡುವುದನ್ನು ನೋಡಲು ಮೋಜೆನಿಸುತ್ತದೆ.
ಒಂದು ಪಂಗಡದವರೆಲ್ಲರೂ ಹೊಡೆದು ಮುಗಿಸಿದಮೇಲೆ ಆಟ ಬದಲಾಯಿಸುತ್ತದೆ. ಯಥಾಪ್ರಕಾರ ಆಟ ಮುಂದುವರಿಯುತ್ತದೆ.

(iii) ಟಾಂಗ್ ಬಿರಾಂಗ್ : ಚಿಣ್ಣಿಕೋಲಿನ ಆಟದಂತೆ ರೂಲುದೊಣ್ಣೆಯಂತಿರುವ ದಾಂಡಿನಿಂದ ಚಿಣ್ಣಿಗೆ ಬದಲಾಗಿ ಚೆಂಡನ್ನು ಹೊಡೆಯುವುದು. ಆದರೆ ಚೆಂಡನ್ನು ನೆಲದ ಮೇಲಿಡದೆ ಟೌಂಗ್ ಎಂದಾಗ ಯಾವುದಾದರೊಂದು ಪಾದವನ್ನೆತ್ತಿ ಅದರ ಮೇಲಿಟ್ಟುಕೊಂಡು ಎಸೆದು, ಬಿರಾಂಗ್ ಎಂದು ಒಂದು ಮುಂಗೈ ಮೇಲೆ ಮಾಡಿಕೊಂಡು ಹೆಬ್ಬೆರಳು ಮತ್ತು ಮಧ್ಯದ ಎರಡು ಬೆರಳನ್ನೂ ಕೆಳಗೆ ಮಡಿಸಿ ತರ್ಜನಿ ಮತ್ತು ಕನಿಷ್ಠ ಬೆರಳುಗಳ ಮೇಲೆ ಚೆಂಡನ್ನಿಟ್ಟುಕೊಂಡು ಮೇಲೆಸೆದು, ಮುಷ್ಟಿ ಎಂದುಕೊಂಡು ಒಂದು ಕೈ ಮುಷ್ಟಿಯ ಮೇಲೆ ಚೆಂಡನ್ನಿಟ್ಟುಕೊಂಡು ಎಸೆದು, ಗೌಡ (ಘೋಡಾ ?) ಎಂದುಕೊಂಡು ಒಂದು ಮಣಿಕಟ್ಟಿನ ಮೇಲೆ, ಅಂಕಿ ಎಂದುಕೊಂಡು ಕಣ್ಣಿನ ಹುಬ್ಬಿನ ಮೇಲಿಟ್ಟುಕೊಂಡು ಚೆಂಡು ಬೀಳಿಸಿ ಮೇಲಿರುವಂತೆಯೇ ದಾಂಡಿನಿಂದ ಹೊಡೆದು ಅಟ್ಟುತ್ತಾರೆ. ಚೆಂಡನ್ನು ನಿಗದಿಯಾದ ಒಂದು ಬದ್ದುವಿನ ಹತ್ತಿರ ಗುರಿಯಿಟ್ಟು ಎಸೆಯಬೇಕು. ಚಿಣ್ಣಿ ಆಟದಂತೆ ಇಲ್ಲೂ ಚೆಂಡನ್ನು ಹೊಡೆದು ಹಿಮ್ಮೆಟ್ಟಿಸಬಹುದು. ನೆಗೆಯುವಷ್ಟು ದೂರದಲ್ಲಿ ಚೆಂಡು ಬಿದ್ದರೆ ಹೊಡೆಯುವವನ ಆಟ ಆಯಿತು. ಮೇಲೆ ಹೇಳಿದ ಯಾವ ಸ್ಥಾನದಲ್ಲಿ ಹೊಡೆದಾಗಲೂ ಏಟು ತಾಗದಿದ್ದರೂ ಆಡುವವನ ಆಟ ಆಯಿತು. ಗುರಿಯಿಟ್ಟು ಚೆಂಡನ್ನು ಬದ್ದಿನತ್ತ ಹೊಡೆದಾಗ ಬದ್ದಿನಿಂದ ಚೆಂಡಿಗಿರುವ ದೂರವನ್ನು ಚಿಣ್ಣಿ ಆಟದಂತೆ ಅಳೆದು ಎಣಿಸುತ್ತಾರೆ. ಆದರೆ ಟಾಂಗ್‍ಬಿರಾಂಗ್ ಇತ್ಯಾದಿಯಾಗಿ ಏಳರ ತನಕ ಇಷ್ಟು ಆಯಿತು ಎಂದು ಲೆಕ್ಕ ಹಾಕುತ್ತಾರೆ.

12 ಚಿಣ್ಣಿಕೋಲು : ಮಕ್ಕಳಲ್ಲಿ ಪ್ರಸಿದ್ಧವಾದ ಆಟ. ಚಿಣ್ಣಿ ಕಣ್ಣಿಗೋ ಮುಖಕ್ಕೋ ಬಡಿದರೆ ಅಪಾಯವೂ ಉಂಟು. ಇದಕ್ಕೆ ಮೇಲೆ ಹೇಳಿದ ಟಾಂಗ್‍ಬಿರಾಂಗಿನಂತೆ ಚೆಂಡು ಬೇಡ. ಬದಲಾಗಿ ಎರಡು ತುದಿಗಳಲ್ಲೂ ಚೂಪು ಮಾಡಿದ ಪುಟ್ಟ ಒಂದು ಒಂದೂವರೆ ಅಂಗುಲ ವ್ಯಾಸದಷ್ಟು ಗಾತ್ರದ ಎರಡು ಮೂರಂಗುಲ ಉದ್ದದ ಮರದ ತುಂಡು ಬೇಕು. ಇದರ ಒಂದು ತುದಿಗೆ ಮೆಲ್ಲಗೆ ಏಟು ಕೊಟ್ಟು ಮೇಲಕ್ಕೆ ಪುಟಿದು ಬರುವಂತೆ ಮಾಡಿ ಹೊಡೆಯಬೇಕು.

ಈ ಆಟದಲ್ಲೂ ಎರಡು ಪಂಗಡ. ಹೊಡೆಯುವವರು ಮತ್ತು ಕಾಯುವವರು. ಚೆಂಡಾಟದಂತೆ ಇಲ್ಲೂ ಅನೇಕ ನಿಯಮಗಳು. ಆದರೆ ಬದ್ದಿನಿಂದ ಚಿಣ್ಣಿಗಿರುವ ದೂರವನ್ನು ದಾಂಡಿನಿಂದ ಅಳೆದು ನೂರಾದರೆ ಒಂದು ಬ್ಯಾಂಕು ಎನ್ನುತ್ತಾರೆ. ಈ ಬ್ಯಾಂಕು ನೂರೇ ಆಗಬೇಕಿಲ್ಲ. ಬೇಕಾದರೆ ಒಪ್ಪಂದದ ಪ್ರಕಾರ ಇಳಿಸಬಹುದು. ತಪ್ಪು ಎಣಿಕೆ ಹೇಳಿದರೆ ಆಗಿದ್ದೆಲ್ಲಾ ಉಫುಫ ಆಗಿ ವಜಾ ಆಗಿಬಿಡುತ್ತದೆ. ಚಿಣ್ಣಿ ಹೊಡೆಯುವ ಮೊದಲು ತುರ್‍ದಾಂಡ್ ತುರ್‍ಬದ್, ತುರ್‍ಚೀಪ್, ಕಟ್‍ಕೋಲ್, ರೆಡಿ? ಎಂದು ಕೇಳಿ ಎದುರಾಳಿಗಳು ರೆಡಿ ಎಂದಮೇಲೆ ಹೊಡೆಯುವುದು ವಾಡಿಕೆ. ಇಲ್ಲಿ ರೆಡಿ ಎನ್ನುವ ಮಾತಿನಂತೆ ಟ್ರೂ ಬಿಡ್, ಟ್ರೂ ಚಿಪ್, ಕಟ್ ಮೊದಲಾದ ಇಂಗ್ಲಿಷ್ ಪದಗಳ ಅಪಭ್ರಂಶಗಳೂ ದಾಂಡು, ಕೋಲ್ ಮೊದಲಾದ ಕನ್ನಡ ಶಬ್ದಗಳೂ ಸೇರಿರುವುದು ಗಮನಾರ್ಹವಾಗಿದೆ. ಆಟ ನಮ್ಮದೇ. ಯಾವಾಗಲೋ ಇಂಗ್ಲಿಷ್ ಪರಿಭಾಷೆ ಬಂದು ಸೇರಿಬಿಟ್ಟಿದೆ, ಅಪಭ್ರಂಶವಾಗಿದೆ.

13 ಕೋಲು ಹಾರಿಸುವ ಆಟ : ಇದಕ್ಕೆ ಎರಡು ಮೂರಡಿ ಉದ್ದದ ಕೋಲುಗಳು ಬೇಕು. ಆಡುವವರು ಎಷ್ಟುಬೇಕಾದರೂ ಇರಬಹುದು. ಒಬ್ಬ ಮಾತ್ರ ತನ್ನ ಕೋಲನ್ನು ನೆಲದಮೇಲೆ ಇಟ್ಟು ಕಾಯಬೇಕು. ಯಾರೂ ಇದಕ್ಕೆ ಒಪ್ಪದಿದ್ದರೆ ಚಪ್ಪಾಳೆ ಹಾಕಿ-ರತ್ತೋ ರತ್ತೋ ಆಟದಂತೆ ತೀರ್ಮಾನಿಸುತ್ತಾರೆ. ಉಳಿದವರೆಲ್ಲ ತಮ್ಮ ಕೋಲನ್ನು ಒಪ್ಪಂದದಂತೆ ಕಲ್ಲಮೇಲೆ ಊರಿ ಇಟ್ಟುಕೊಂಡಿದ್ದು ಕೋಲು ಕಾಯುತ್ತಿರುವವನ ಕೈಗೆ ಸಿಕ್ಕದಂತೆ ಆತನ ಕೋಲನ್ನು ಹಾರಿಸಿಕೊಂಡು ಹೋಗಬೇಕು. ನೆಲದ ಮೇಲೆ ಕೋಲು ಊರಿದವನನ್ನು ಕಾಯುವವ ಮುಟ್ಟಿದರೆ ಅವನು ಔಟ್ ಆದಂತೆ. ಕಾಯುವವನಿಗೆ ಕೋಲು ಕೊಟ್ಟವನೂ ಸಿಕ್ಕಿಬಿದ್ದ. ಇಲ್ಲದಿದ್ದರೆ ಆತನ ಕೋಲನ್ನು ಸಾಧ್ಯವಾದಷ್ಟು ದೂರ ಹಾರಿಸುತ್ತಾರೆ. ಎಲ್ಲೋ ಒಂದು ಕಡೆ ಆತ ಗೆಲ್ಲುತ್ತಾನೆ. ಆಗ ಅವನು ಮೊದಲು ಹೊರಟ ಸ್ಥಾನವನ್ನು ಕುಂಟಿಕೊಂಡು ಕವಡೆ ಕವಡೆ, ಕಂಚಿನ ಕವಡೆ; ಕವಡೆ ಕವಡೆ ಕಂಚಿನ ಕವಡೆ ಎಂದು ಹೇಳುತ್ತ ಉಸಿರು ಬಿಡದೆ, ಮೂರೇ ಉಸಿರಿನಲ್ಲಿ ತಲುಪಬೇಕು. ಕಾಲೂ ಬಿಡಕೂಡದು. ಇದರಲ್ಲೂ ನಿಯಮಗಳ ವ್ಯತ್ಯಾಸವಿದೆ.

14 ಬುಗುರಿ: ಇದಕ್ಕೆ ಮರದ ಬುಗುರಿಗಳೂ ದಾರವೂ ಬೇಕು. ಎಲ್ಲರೂ ತಮ್ಮ ತಮ್ಮ ಬುಗುರಿಗೆ ದಾರ ಸುತ್ತಿ ಒಂದೇ ಸಾರಿಗೆ ಬುಗುರಿ ಆಡಿಸಬೇಕು. ಆಡುತ್ತಿದ್ದಂತೆಯೇ ಯಾರು ಬುಗುರಿಯನ್ನು ದಾರ ಸುತ್ತಿ ಮೇಲೆಸೆದು ಆನಲು ತಪ್ಪುವನೋ ಆತನೇ ಬದ್ದಿನಲ್ಲಿ ಬುಗುರಿಯಿಡಬೇಕು. ಉಳಿದವರು ನೇರವಾಗಿ ಹೊಡೆದೂ ಅಥವಾ ಆಡುತ್ತಿದ್ದ ಬುಗುರಿಯನ್ನು ಹಾಗೆಯೇ ಬೆರಳುಗಳಿಂದ ಉಪಾಯವಾಗಿ ಎತ್ತಿಯೋ ಅದರ ಮೇಲೆಸೆದು ಅದನ್ನು ಬದ್ದಿನ ಸುತ್ತಣ ವೃತ್ತದಿಂದ ಹೊರಹೊರಡಿಸಬೇಕು. ಅದು ಹೊರಟ ತತ್‍ಕ್ಷಣವೇ ಮಿಂಚಿನ ವೇಗದಲ್ಲಿ ಎಲ್ಲರೂ-ಬುಗುರಿಯಿಟ್ಟಿದ್ದವನೂ-ತಮ್ಮ ತಮ್ಮ ಬುಗುರಿಗೆ ದಾರ ಸುತ್ತಿ, ಆಡಿಸಿ ಮೇಲೆತ್ತಬೇಕು. ಬುಗುರಿ ಹೊರಡಿಸಿದವನ ಬುಗುರಿ ಇನ್ನೂ ಆಡುತ್ತಿದ್ದರೆ ಅದನ್ನೇ ಅವನು ಮೇಲೆತ್ತಬಹುದು. ಕೊನೆಯಲ್ಲುಳಿದವನೇ ಕಳ್ಳ. ಆಟ ಹೀಗೆ ಮುಂದುವರಿಯುತ್ತದೆ. ಚುರುಕಾದ ಆಟಗಾರರಾದರೆ ಸೋತವನ ಬುಗುರಿಯನ್ನು ಗುನ್ನಹಾಕಿ ಒಡೆದಿಡುತ್ತಾರೆ.

15 ಕೊಕ್ಕೋ : ಈ ಆಟಕ್ಕೆ ಆಡುವವರಿದ್ದರೆ ಸಾಕು. ಆಟಗಾರರಲ್ಲಿ ಕೊಕ್ಕು ಕೊಡುವವರು ಮತ್ತು ಹಿಡಿಯುವವರು ನಾಲ್ಕು ಅಥವಾ ಐದೇ ಜನ; ಉಳಿದವರು ಸಿಕ್ಕಿದಂತೆ ಓಡಾಡುವರು, ಈಚೀಚೆಗೆ ಈ ಆಟ ಪಟ್ಟಣಗಳಲ್ಲೂ ಬಹುಮನ್ನಣೆ ಪಡೆದು ನಿಬಂಧನೆಗಳು ಶಾಸ್ತ್ರೀಯವಾಗಿ ಮಾರ್ಪಟ್ಟು ಅಖಿಲ ಭಾರತೀಯ ಮಟ್ಟಕ್ಕೇರುವಷ್ಟು ಜನಾದರಣೆ ಪಡೆದಿದೆ. ಹಿಡಿಯುವವರು ಸರದಿ ಬದಲಾಯಿಸುವಾಗ ಕುಳಿತಿರುವವರನ್ನು ಕೊಕ್ಕೆಂದು ಕೂಗಿ ಎಬ್ಬಿಸುತ್ತಾರೆ. ಅದಕ್ಕೆ ಈ ಹೆಸರು. ಒಂದೇ ಸಮನೆ ಓಡೋಡಿ ಬಂದು ಹಿಡಿಯಬೇಕಾದವರನ್ನು ಓಡಿಸಿಕೊಂಡು ಸುತ್ತುತ್ತಾ ಕೊಕ್‍ನನ್ನು ಕೊಟ್ಟರೆ ತಾರಿಮೇರಿ ಕೊಕ್ ಎನ್ನುವುದುಂಟು. ಸುಧಾರಿತ ಆಟದಲ್ಲಿ ಕೊನೆಯಲ್ಲಿ ಮರದ ಮೂರಡಿಯ ಕಂಬಗಳಿರುತ್ತದೆ. ಹಳ್ಳಿಗಳಲ್ಲಾದರೊ ಗಟ್ಟಿದೇಹದ ಇಬ್ಬರೂ ಕಂಬಗಳ ಕೆಲಸ ಮಾಡುತ್ತ ಸ್ಥಾಣುಗಳಾಗಿದ್ದು ಆಟ ನೋಡಿ ಸಂತೋಷಪಡುತ್ತಾರೆ. ತಲೆಗೆ ಮಾತ್ರ ಸ್ವಲ್ಪ ತಾಪತ್ರಯ. ಹಿಡಿಯುವ ಆಟಗಾರ ತಲೆಯನ್ನು ಹಿಡಿದು ಕಾರ ತಿರುವುತ್ತಿರುತ್ತಾನೆ.

16 ಹುಡುತುತು : ಇದನ್ನು ಚುಡುಗುಡು ಎಂದೂ ತುತುತುತೂ ಎಂದೂ ಕಬಡಿ ಎಂದೂ ಕರೆಯುತ್ತಾರೆ. ಇದಕ್ಕೆ ಆಟಗಾರರೇ ಸಾಕು. ತರುಣರ ಆಟವಾಗಿದ್ದರೆ ನೋಡುವವರ ಕಣ್ಣು ಮುಂದೆ ಮಲ್ಲಯುದ್ಧದ ಚಿತ್ರ ಮೈದೋರಿ ಕುಣಿಯುತ್ತದೆ. 
ಇದರಲ್ಲಿ ಸಮನಾಗಿ ಎರಡು ಗುಂಪು. ಆಟದ ಮೈದಾನವನ್ನು ಎಲ್ಲೆಕಟ್ಟು ಹಾಕಿ ಮಧ್ಯಕ್ಕೆ ಸಮಭಾಗ ಮಾಡುತ್ತಾರೆ. ಯಾವುದಾದರೊಂದು ಕಡೆಯವರಲ್ಲಿ ಯಾರಾದರೊಬ್ಬರು ಉಸಿರು ಕಟ್ಟಿ ಗುಡು ಗುಡು ಎನ್ನುತ್ತ ಮಧ್ಯದ ಗೆರೆ ದಾಟಿ ಎದುರಾಳಿಗಳತ್ತ ಹೋಗಿ, ಅವರ ಹಿಡಿತಕ್ಕೆ ಸಿಗದೆ ಅವರಲ್ಲೊಬ್ಬನನ್ನು ಮುಟ್ಟಿ ಹಿಂತಿರುಗಬೇಕು. ಆಗ ಮುಟ್ಟಿಸಿಕೊಂಡವ ಸೋತನೆಂದು ಅರ್ಥ. ಈ ಯತ್ನದಲ್ಲಿ ಉಸಿರು ಬಿಟ್ಟರೆ, ಸಿಕ್ಕಿಬಿದ್ದರೆ, ಗೆರೆಯನ್ನು ದಾಟಿ ಪಾಳೆಯದಿಂದ ಹೊರಗೆ ಹೋಗುವಂತಿಲ್ಲ. ಒಂದು ಕಡೆ ಒಬ್ಬ ಹಿಡಿಯುವ ಪ್ರಯತ್ನ ಮಾಡಿದ ಮೇಲೆ ಇನ್ನೊಂದು ಕಡೆಯವರ ಆಟ. ಹೀಗೆ ಆಟ ಮುಂದುವರಿದು ಕೊನೆಯಲ್ಲಿ ಯಾವುದಾದರೊಂದು ತಂಡ ಗೆಲ್ಲುತ್ತದೆ.

17 ಕೋಲಾಟ : ಆಟಗಳಲ್ಲೆಲ್ಲ ಕಲಾತ್ಮಕವೂ ಜನಪ್ರಿಯವೂ ಆದುದೆಂದರೆ ಕೋಲಾಟವೇ ಆಗಿದೆ. ಇದೊಂದು ರಂಜನೀಯ ಪ್ರಕಾರ. ಸುಗ್ಗಿಯ ಕಾಲದಲ್ಲಿ, ಹಬ್ಬಹರಿದಿನಗಳಲ್ಲಿ ಹೆಚ್ಚು ಆಡುತ್ತಾರೆ. ಇರುಳ ಬೆಳದಿಂಗಳಿನಲ್ಲಿ ಆಟ ಆಡುತ್ತಿದ್ದರೆ, ಕಣ್ಣಿಗೆ ಹಬ್ಬ, ಕಿವಿಗೆ ರಸದೌತಣ. ಹೃದಯದಲ್ಲಿ ಹಿಗ್ಗಿನ ಕಾರಂಜಿ ಪುಟಿಯುತ್ತದೆ. ಮೈ ನವಿರೇಳುತ್ತದೆ. ಹೀಗೆ ಉಲ್ಲಾಸಕರವೂ ಆನಂದದಾಯಕವೂ ಆದ ಕೋಲಾಟ ಆಬಾಲವೃದ್ಧರಾದಿಯಾಗಿ ಸರ್ವರಿಗೂ ಪ್ರಿಯವಾದದ್ದು, ಆಕರ್ಷಕವಾದದ್ದು. ಇದರಲ್ಲಿ ಹುಡುಗರಂತೆ ದೊಡ್ಡವರೂ ಭಾಗವಹಿಸುತ್ತಾರೆ. ಇಲ್ಲಿಯ ಆಟಗಾರರ ಸಾಧನಗಳೆಂದರೆ ಕೋಲುಗಳು. ಕೋಲುಗಳ ಮೂಲಕವೇ ಆಟ ವಿವಿಧ ಭಂಗಿಯಲ್ಲಿ ಸಾಗುವುದರಿಂದ ಇದಕ್ಕೆ ಕೋಲಾಟವೆಂದೇ ಹೆಸರಾಯಿತು. ಕೋಲುಗಳನ್ನು ನೀರಂಜಿ ಮರದಿಂದ ಮಾಡಿರುತ್ತಾರೆ. ಆಟಗಾರರು ಕೋಲು ಕೋಲಣ್ಣ ಕೋಲೆ, ಕೋಲು ರನ್ನದ ಮೇಲೆ ಎಂದು ಮುಂತಾಗಿ ಹೇಳುತ್ತ ಆಟವನ್ನು ಪ್ರಾರಂಭಿಸುವರು. ಈ ಕೋಲಾಟದಲ್ಲಿ ಹಲವಾರು ಒಳಭೇದಗಳಿವೆ. ಅವುಗಳಲ್ಲಿ ಮುಖ್ಯವಾದವುಗಳು ಸುತ್ತುಕೋಲು, ಹಾರ್‍ಗುಟುಕು, ಜಡೆಕೋಲು, ಗೀಜಗನ ಕೋಲು, ತೇರುಕೋಲು, ಚಟುಕಿನ ಕೋಲು, ವಾದದ ಕೋಲು, ಕಾಲ ಸಂದಿನ ಕೋಲು, ಕೊರವಂಜಿ ಕೋಲು ಮತ್ತು ಉಯ್ಯಾಲೆ ಕೋಲು.

ಹೀಗೆ ವಿವಿಧ ರೂಪದಲ್ಲಿ ಕಾಣಿಸಿಕೊಳ್ಳುವ ಕೋಲಾಟ ಹಳ್ಳಿಯ ಮನರಂಜನೆಯಲ್ಲಿ ಅಗ್ರ ಪಾತ್ರವನ್ನು ವಹಿಸುತ್ತದೆ. ಕೋಲಾಟ ಕೇವಲ ಆಟ ಮಾತ್ರವಾಗಿರದೆ ಕಲೆ ಕೂಡ ಆಗಿದೆ. ಇದರಲ್ಲಿ ಬರುವ ಹಾಡು, ಹಾಡಿಗೆ ತಕ್ಕ ಕುಣಿತ, ಕುಣಿತಕ್ಕೆ ತಕ್ಕ ಕೋಲುಗಳ ಸಪ್ಪಳ-ಇವುಗಳಿಂದಾಗಿ ಆಸ್ವಾದಿಸುವ ಹೃದಯದಲ್ಲಿ ಮಹತ್ತಾದ ಪರಿಣಾಮವನ್ನು ಬೀರುತ್ತದೆ. ಹೀಗೆ ಆಟ ಸಂಗೀತ ಮತ್ತು ನರ್ತನ-ಈ ಮೂರರ ಸಮ್ಮಿಲನವಾಗಿರುವ ಕೋಲಾಟ ಜನಪದ ಆಟಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವುದು ಮಾತ್ರವಲ್ಲದೆ. ಉತ್ಕøಷ್ಟ ಕಲೆಯೂ ಆಗಿ ಪರಿಣಮಿಸಿದೆ. (ನೋಡಿ- ಕೋಲಾಟ)

18 ಬಳೆಗಾಜಿನ ಆಟ : ಇದರಲ್ಲಿ ಎರಡು ಪಕ್ಷಗಳಿರುತ್ತದೆ. ನೆಲದಲ್ಲಿ ಮೂರು ಗುಳಿಗಳನ್ನು ತೋಡಿಸುತ್ತಾರೆ. ಆಮೇಲೆ ಆಟಗಾರರೆಲ್ಲ ಒಂದೆಡೆ ಸೇರಿ ಕಾಸನ್ನು ಮೇಲಕ್ಕೆಸೆದು ಸೋಲು ಗೆಲುವನ್ನು ನಿರ್ಧರಿಸುತ್ತಾರೆ. ಇದಕ್ಕೆ ಟಾಸ್ ಎಂದು ಹೆಸರು. ಸೋತವರು ಗುಳಿಯಿಂದ ಬಳೆಗಾಜನ್ನು ತೆಗೆಯಬೇಕಾಗುತ್ತದೆ; ಗೆದ್ದವರು ಬಳೆಗಾಜನ್ನು ಹೂತಿಡುವ ಕೆಲಸವನ್ನು ವಹಿಸಬೇಕಾಗುತ್ತದೆ; ಗೆದ್ದವರು ಇರುವ ಮೂರು ಗುಳಿಗಳಲ್ಲಿ ಯಾವುದಾದರೂ ಒಂದಕ್ಕೆ ಬಳೆಚೂರುಗಳನ್ನು ಹಾಕಿ ಮೂರನ್ನೂ ಮಣ್ಣಿನಿಂದ ಮುಚ್ಚಿರುತ್ತಾರೆ. ಆಗ ಸೋತವರು ಬಳೆಗಾಜು ಎಲ್ಲಿದೆ ಎಂದು ಹುಡುಕಬೇಕು. ಅವರು ಮೂರು ಗುಳಿಗಳ ಮೇಲೂ ಕೈಯಾಡಿಸಿ, ಯಾವುದೇ ಒಂದನ್ನು ಗೋರುತ್ತಾರೆ. ಹಾಗೆ ಗುಳಿಯಿಂದ ಮಣ್ಣನ್ನು ಗೋರಿದಾಗ ಅವರಿಗೆ ಬಳೆ ಸಿಕ್ಕಿದರೆ ಅವರು ಗೆದ್ದ ಹಾಗೆ. ಬಳೆ ಸಿಕ್ಕುವುದೇ ಅವರಿಗೆ ಲಾಭ. ಒಂದು ಪಕ್ಷ ಬಳೆ ಸಿಕ್ಕದೆ ಹೋದರೆ ಅವರು ಸೋತಂತೆ. ಆಗ ಗೆದ್ದವರು ಬಳೆಗಳನ್ನು ತೆಗೆದು ತೋರುವರು. ಸೋತವರು ಆ ಬಳೆಗಳು ಎಷ್ಟಿದ್ದವೋ ಅಷ್ಟನ್ನು ಸೇರಿಸಿ ಗೆದ್ದವರಿಗೆ ಕೊಡಬೇಕಾಗುತ್ತದೆ. ಹೀಗೆ ಆಟ ಮುಂದುವರಿಯುತ್ತಿರುತ್ತದೆ. ಇದರಲ್ಲಿ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಇಬ್ಬರೂ ಪಾತ್ರವಹಿಸಬಹುದು. ಈಚೆಗೆ ಈ ಆಟದಲ್ಲಿ ಬಹಳ ಸುಧಾರಣೆಗಳಾಗಿವೆ. ಕೊಕ್ಕೋ ಆಟದಂತೆ ಅನೇಕ ಹೊಸ ನಿಯಮ ನಿಬಂಧನೆಗಳು ಬಂದಿವೆ. ಇದೂ ಬಹಳ ಜನಪ್ರಿಯವಾಗಿ, ಅಖಿಲ ಭಾರತೀಯ ಮನ್ನಣೆ ಪಡೆದಿದೆ. 

ಇದೇ ರೀತಿ ಇನ್ನೂ ಸಾಹಸದ ಆಟಗಳಾದ ಕತ್ತಿವರಸೆ, ಪಂಜು ತಿರುಗಿಸುವುದು, ದೊಣ್ಣೆವರಸೆಗಳೂ, ಕುಸ್ತಿಯೂ ಹಳ್ಳಿಗಾಡಿನ ಮೂಲೆಮೂಲೆಗಳಲ್ಲಿ ಇನ್ನೂ ಕುಟುಕು ಜೀವ ಉಳಿಸಿಕೊಂಡಿವೆ, ಸಾಮೂಹಿಕ ನೃತ್ಯಗೀತಗಳಿಂದ ಕೂಡಿದ ಕೋಲಾಟವಂತೂ ಕನ್ನಡನಾಡಿನ ಹೆಮ್ಮೆ. ಹಬ್ಬಗಳಲ್ಲಿ ಪುಟಾಣಿಗಳ ಪಟದ ಹಬ್ಬವೊಂದಿದೆ. ಅತ್ತೆಸೊಸೆಯರು ಒಂದೇ ಹೊಸಲನ್ನು ತುಳಿಯಬಾರದ ಆಷಾಢಮಾಸದ ಪ್ರಥಮೈಕಾದಶೀ ದಿನವೇ ಮಕ್ಕಳ ಈ ಮಹೋತ್ಸವದ ದಿನ. ಮಕ್ಕಳ ಹಿಂದೆ ಮುದುಕರೂ ಹೊರಡುವ ರಸಘಳಿಗೆ ಅದು.
ನಾಗರಿಕತೆ, ಪಾಶ್ಚಾತ್ಯ ಕ್ರೀಡೆಗಳು, ಪದ್ಧತಿಗಳ ಅನುಕರಣೆ ಜಾನಪದ ಆಟಗಳಿಗೆ ಕುಠಾರಪ್ರಾಯವಾಗಿವೆ.

19 ಕಲ್ಲೊ ಮಣ್ಣೊ: ಹೆಣ್ಣುಮಕ್ಕಳು ಗಂಡುಮಕ್ಕಳು ಯಾರಾದರೂ ಭಾಗವಹಿಸಬಹುದಾದ ಈ ಆಟದಲ್ಲಿ ಹಿಡಿಯುವವನೊಬ್ಬ, ಹಿಡಿಸಿಕೊಳ್ಳುವವರು ಹೀಗೆ ಎರಡು ಪಕ್ಷಗಳಿರುತ್ತಾರೆ. ಎಡಗೈ ಹಸ್ತದ ಮೇಲೆ ಬಲಗೈ ಹಸ್ತವನ್ನು ತಾಳ ಹಾಕುವುದರ ಮೂಲಕ ಹಿಡಿಯುವವನ ನಿರ್ಧಾರವಾಗುತ್ತದೆ, ಸೋತ ವ್ಯಕ್ತಿ ಹಿಡಿಯಲು ತೊಡಗಬೇಕಾಗುತ್ತದೆ. ಆಗ ಅವರು ಕಲ್ಲು ಅಂದರೆ ಅವರು ಕಲ್ಲಿನ ಮೇಲೆ ನಿಂತಾಗ ಹಿಡಿಯಬೇಕು. ಮಣ್ಣು ಅಂದರೆ, ಅವರು ಮಣ್ಣಿನ ಮೇಲೆ ನಿಂತಾಗ ಹಿಡಿಯಬೇಕು. ಆದರೆ ಅವರು ಅಷ್ಟು ಬೇಗ ಸಿಕ್ಕುವವರಲ್ಲ, ಕಲ್ಲು ಎಂದು ಹೇಳಿ ಮಣ್ಣಿನ ಮೇಲೂ, ಮಣ್ಣು ಎಂದು ಹೇಳಿ ಕಲ್ಲಿನ ಮೇಲೂ ನಿಂತುಕೊಳ್ಳುವರು. ಆದರೆ ಅವರು ಹಾಗೆಯೇ ನಿಂತುಕೊಂಡುಬಿಟ್ಟರೆ ಇವನು ಹಿಡಿಯಲೂ ಆಗುವುದಿಲ್ಲ. ಆಟವೂ ಸಾಗುವುದಿಲ್ಲ, ಆದ್ದರಿಂದ ಅವರು ಆಟ ಕೊಡಬೇಕಾಗುತ್ತದೆ. ಅಂದರೆ ಅವರು ಕಲ್ಲಿಂದ ಮಣ್ಣಿಗೂ ಮಣ್ಣಿಂದ ಕಲ್ಲಿಗೂ ಓಡಾಡುತ್ತಿರುತ್ತಾರೆ. ಆಟ ಕ್ರಿಯಾತ್ಮಕವಾಗಿ ಸಾಗುತ್ತದೆ. ಹಿಡಿಸಿಕೊಳ್ಳುವವರಲ್ಲಿ ಮತ್ತು ಹಿಡಿಯುವವರಲ್ಲಿ ಎಚ್ಚರಿಕೆ ಸದಾ ಇರುತ್ತದೆ. ಅವರ ಹೇಳಿಕೆಗೆ ವಿರುದ್ಧವಾಗಿ ನಿಂತು ಆಗ ಏನಾದರೂ ತತ್‍ಕ್ಷಣ ಈತ ಅವರನ್ನು ಮುಟ್ಟಿ ಬಿಟ್ಟರೆ ಅವರು ಸೋತುಹೋದಂತೆ. ಆಗ ಹಿಡಿಸಿಕೊಂಡವನು ಹಿಡಿಯಬೇಕಾಗುತ್ತದೆ. ಹಿಡಿಯುತ್ತಿದ್ದವನು ಹಿಡಿಸಿಕೊಳ್ಳುವವರ ಗುಂಪಿಗೆ ಸೇರಿಕೊಳ್ಳುವನು. ಹೀಗೆ ಆಗ ನಿರಂತರವಾಗಿ ರಂಜನೀಯವಾಗಿ ಸಾಗುತ್ತದೆ. ಹೀಗೆ ಆಟವಾಡುವಾಗ ಆಟಗಾರರು ನಿನ್ನ ಕಲ್ಲಿಗೆ ನಾನು ಬಂದೆ, ನಿನ್ನ ಮಣ್ಣಿಗೆ ನಾನು ಬಂದೆ ಎಂದು ಹೇಳುತ್ತ ಆಟವಾಡುತ್ತಾರೆ.

20 ಸುರುಸುರುಕೆ ಬತ್ತಿ : ಇದರಲ್ಲಿ ಎರಡು ಪಕ್ಷಗಳಿರುತ್ತವೆ. ಪ್ರತಿ ಪಕ್ಷಕ್ಕೂ ಒಬ್ಬೊಬ್ಬ ಮುಖ್ಯಸ್ಥ ಇರುವನು. ಈ ಎರಡು ಪಕ್ಷಗಳ ಆಟಗಾರರೂ ಎದುರು ಬದುರಾಗಿ ಸಮಾನಾಂತರವಾಗಿ ಸಾಲಾಗಿ ಕುಳಿತುಕೊಳ್ಳುವರು. ಆಗ ಅವರ ಎರಡು ಕೈಗಳನ್ನೂ ಹಿಂದಕ್ಕೆ ತೆಗೆದು ಎರಡು ಕೈಗಳ ಬೆರಳುಗಳ ಮಧ್ಯೆ ಪರಸ್ಪರ ಸೇರಿಸಿ, ಬೊಗಸೆಯಾಗಿ ಮಾಡಿಕೊಂಡು ಬೆನ್ನಹಿಂದೆ ಕೈಗಳನ್ನು ಬಿಟ್ಟು ಪಕ್ಷಗಳ ಮುಖ್ಯಸ್ಥರು ತಮ್ಮ ಪಕ್ಷದ ಆಟಗಾರರ ಹಿಂದೆ ನಿಂತುಕೊಳ್ಳುವರು. ಆಟವನ್ನು ಮೊದಲು ಯಾರು ಆಡಬೇಕೆಂಬುದನ್ನು ನಾಣ್ಯವನ್ನು ಮೇಲೆಸೆದು ಟಾಸ್ ಹಾಕುವುದರ ಮೂಲಕ ನಿರ್ಧರಿಸುತ್ತಾರೆ. ಆಟದ ಸರದಿ ಬಂದಾಗ, ಪಕ್ಷದ ಮುಖ್ಯಸ್ಥ ಇದ್ದವನು ಒಂದು ಚೂರು ಬಟ್ಟೆಯನ್ನು ತೆಗೆದುಕೊಂಡು, ಅದನ್ನು ಉಂಡೆ ಮಾಡಿ, ತಮ್ಮ ಪಕ್ಷದ ಆಟಗಾರರ ಹಿಂದೆ ಬಿಟ್ಟಿರುವ ಎಲ್ಲ ಕೈಗಳಿಗೂ ಬಟ್ಟೆಯನ್ನು ಇಟ್ಟ ಹಾಗೆ ಮಾಡಿ ಇಡದಂತೆ ನಟಿಸುತ್ತ ಹೋಗುವನು. ಹೀಗೆ ಮಾಡುವಾಗ ಸುರುಸುರಕೆ ಬತ್ತಿ, ಸೊಂಡಾನೆ ಬತ್ತಿ, ನೋಡಿದವರ ಕಣ್ಣಿಗೆ ಜುಮಜುಮ ಎಂದು ಹೇಳುವರು. ಆ ಬಟ್ಟೆಯ ಬತ್ತಿಯನ್ನು ಕೊನೆಗೆ ಯಾವನೋ ಒಬ್ಬನ ಕೈಲಿ ಬಿಟ್ಟು, ಇನ್ನೊಬ್ಬನ ಕೈಲಿ ಇಟ್ಟಂತೆ ನಟಿಸಿ, ಮತ್ತೆ ಅವರ ಕೈಗಳಿಗೂ ಇಡುವಂತೆ ಓಡಾಡಿ ನಿಂತುಕೊಳ್ಳುವನು. ಆಗ ಟಾಸ್‍ನಲ್ಲಿ ಸೋತವನು ಬಟ್ಟೆಬತ್ತಿ ಯಾರ ಹತ್ತಿರ ಇದೆ ಎಂಬುದನ್ನು ಹೇಳಬೇಕು. ಎರಡು ಪಕ್ಷದ ಸಾಲಿಗೂ ಸುಮಾರು ಐದಾರು ಅಂತವಿರುವುದರಿಂದ ಇವನು ಯಾರ ಕೈಲಿ ಬತ್ತಿ ಇಟ್ಟನೋ ಹೇಳುವುದು ಕಷ್ಟ. ಸೋತ ಮುಖ್ಯಸ್ಥ ಊಹಾಶಕ್ತಿಯ ಮೇಲೆ ಹಾಗೂ ಬಟ್ಟೆ ಇರುವವನ ಮುಖದ ಭಾವನೆಗಳ ಮೂಲಕ ಕಲ್ಪಿಸಿ ಹೇಳುವನು. ಹಾಗೆ ಅವನು ಹೇಳಿದುದು ಆಟ ಇವರ ಪಕ್ಷಕ್ಕೆ ಬಂದುಬಿಡುತ್ತದೆ. ಆಗ ಎದುರು ಪಕ್ಷದವರು ಹೇಳಬೇಕಾಗುತ್ತದೆ. ಇಲ್ಲದಿದ್ದರೆ ಆಟ ಅಲ್ಲಿಯೇ ಮುಂದುವರಿಯುತ್ತದೆ.

21 ಮೊಟ್ಟೆಯಿಕ್ಕುವಾಟ: ಅನೇಕ ಆಟಗಾರರಿರುವ ಈ ಆಟದಲ್ಲಿ ಎರಡು ಪಕ್ಷಗಳಿರುತ್ತವೆ. ಇವರ ಆಟಕ್ಕೆ ಇಡೀ ಬೀದಿಯೇ ಆಟದ ಭೂಮಿಯಾಗುತ್ತದೆ. ಎರಡು ಮಣ್ಣಿನ ಸಣ್ಣ ಸಣ್ಣ ಗುಪ್ಪೆಗಳನ್ನು ಇಡುತ್ತ ಬರುವರು. ಇವೇ ಮೊಟ್ಟೆಗಳು. ಹೀಗೆ ಅಸಂಖ್ಯಾತ ಮೊಟ್ಟೆಗಳನ್ನು ಇಟ್ಟಮೇಲೆ ಮೊಟ್ಟೆ ಇಡುವುದು ಸಾಕು ಎಂದುಕೊಂಡವರು ಗುಡ್‍ಗುಡಾರಿಯೊ ಎಂದು ಕೂಗುವರು. ಆಗ ಇಲ್ಲರೂ ಮೊಟ್ಟೆ ಇಡುವುದನ್ನು ನಿಲ್ಲಿಸಬೇಕು. ನಿಲ್ಲಿಸಿದ ಮೇಲೆ ಒಂದು ಪಕ್ಷದವರು ಮತ್ತೊಂದು ಪಕ್ಷದವರ ಮೊಟ್ಟೆಗಳನ್ನು ಪತ್ತೆ ಹಚ್ಚುವ ಕೆಲಸದಲ್ಲಿ ನಿರತರಾಗುವರು. ಹಾಗೆ ಹುಡುಕಿದ ಮೊಟ್ಟೆಗಳನ್ನು ಎಣಿಕೆ ಮಾಡಿಕೊಳ್ಳುವರು. ಇನ್ನು ಹುಡುಕಲು ಆಗುವುದಿಲ್ಲ ಎಂದಮೇಲೆ, ಮೊಟ್ಟೆಗಳನ್ನು ಇಟ್ಟವರೇ ಎದುರು ಪಕ್ಷದವರಿಗೆ ತೋರಿಸುವರು. ಅನಂತರ ಎರಡು ಗುಂಪುಗಳು ಒಂದು ಕಡೆ ಸೇರಿ ಒಬ್ಬೊಬ್ಬರದು ಎಷ್ಟು ಮೊಟ್ಟೆಗಳೆಂಬುದನ್ನು ಕಳೆದರೆ, ಉಳಿದ ಮೊಟ್ಟೆಗಳ ಗುಂಪಿನವರು ಗೆದ್ದಹಾಗೆ. ಸೋತವರು ಬೈಸ್ಕೆ ಹೊಡೆಯಬೇಕಾಗುತ್ತದೆ. ಕೆಲವು ಸಾರಿ ಸಾಲ ತೀರಿಸುವ ವಿಧಾನವನ್ನೂ ಆಟದಲ್ಲಿ ತರಬಹುದು. ಈ ಆಟದಲ್ಲಿ ಚಾಕಚಕ್ಯತೆ ಮುಖ್ಯ ಅಷ್ಟೆ.

22 ತೆಂಗಿನಕಾಯಿ ಜೂಜು : ಕೆಲವು ಕಡೆ ಮಾತ್ರ ಪ್ರಚಲಿತವಾಗಿರುವ ಈ ಆಟದಲ್ಲಿ ಒಂದು ಮೋಜು ಇದೆಯೆಂದೇ ಹೇಳಬೇಕು. ಮಲೆನಾಡು ಪ್ರದೇಶಗಳಲ್ಲಿ ಹಾಗೂ ಕನ್ನಡ ಜಿಲ್ಲೆಗಳಲ್ಲಿ ಇದರ ಖಯಾಲು ಹೆಚ್ಚು. ಕಾಯಿಯನ್ನು ಒಡ್ಡುವವನು ಕಲ್ಲುಗಳನ್ನೂ ಮಾರುತ್ತಾನೆ. ಹೊಡೆಯುವವರು ಆ ಕಲ್ಲುಗಳನ್ನು ಕೊಂಡುಕೊಳ್ಳಬೇಕು. ಕೊಂಡುಕೊಂಡ ಮೇಲೆ ನಿರ್ದಿಷ್ಟವಾದ ದೂರದಿಂದ ಕಾಯಿಗೆ ಕಲ್ಲನ್ನು ಬೀಸಿ ಹೊಡೆಯುತ್ತಾರೆ. ಮೊದಲ ಏಟಿಗೆ ಕಾಯಿ ಒಡೆದರೆ ಕಾಯಿ ಒಡೆದವರಿಗೆ ಬಿಟ್ಟಿಯಾಗಿ ಸಿಗುತ್ತದೆ. ಹಾಗಾಗದಿದ್ದರೆ, ಮುಂದೆ ಕಾಸಿನ ಎಣಿಕೆ ಪ್ರಾರಂಭವಾಗುತ್ತದೆ. ಹೀಗೆ ಇವರು ಆಟ ಆಡುವಾಗ ಪ್ರೇಕ್ಷಕರು, ಕೂಡ ದುಡ್ಡನ್ನು ಕಟ್ಟಿ ಜೂಜಿಗೆ ಸಕ್ರಿಯವಾಗಿ ಭಾಗವಹಿಸುವುದುಂಟು. ಆಗ ಹೊಡೆಯುವವನಿಗೆ ಒಂದು ರೀತಿ ಹುಮ್ಮಸ್ಸು ಬಂದಿರುತ್ತದೆ. ಆಟ ಬಹು ಮೋಜಿನಿಂದ ಸಾಗುತ್ತದೆ. ಆಟ ಮೋಜಾದರೂ ಇದು ಜೂಜೆಂಬುದನ್ನು ಮರೆಯುವಂತಿಲ್ಲ. ಕಾಯನ್ನು ಒಡ್ಡುವವನು ಬೇಕೆಂತಲೇ ಬೇಗನೆ ಏಟಿಗೆ ಸಿಗದ ಪಿಚ್ಚ ಕಾಯಿಗಳನ್ನು ತರುವುದುಂಟು.

23 ತ್ರಿರಂಗ : ಇದು ಇಬ್ಬರೇ ಆಟಗಾರರು ಆಡುವ ಆಟ ನೆಲದ ಮೇಲೆ ಮನೆಯನ್ನು ಬರೆದು ಆಟಗಾರರಿಬ್ಬರೂ ಎದುರುಬದುರಾಗಿ ಕುಳಿತುಕೊಳ್ಳುತ್ತಾರೆ. ಪ್ರತಿಯೊಬ್ಬನ ಹತ್ತಿರವೂ ಒಂಬತ್ತು ಒಂಬತ್ತು ಕಾಯಿಗಳು ಇರುತ್ತವೆ. ಇವರು ಕಾಯಿ ಇಡಬೇಕಾದರೆ ನೇರ ರೇಖೆಯೇ ಆಗಿರಬೇಕು ಮತ್ತು ಮೂರು ಕೇಂದ್ರಗಳೇ ಇರಬೇಕು. ಸಿಕ್ಕಾಪಟ್ಟೆಯಾಗಿ ಎಲ್ಲೆಂದರಲ್ಲಿ ಕಾಯನ್ನು ಮೂರು ಕೇಂದ್ರಗಳಿರುವ ಒಂದು ನೇರ ರೇಖೆಯಲ್ಲಿ ಒಬ್ಬನೇ ಮೂರು ಕಾಯಿಗಳನ್ನು ಇಟ್ಟುಬಿಟ್ಟರೆ, ಆಗ ಎದುರು ಪಕ್ಷದವನು ಇವನಿಗೆ ಇಂಥ ಅವಕಾಶಮಾಡಿಕೊಡದೆ ಇವನು ಆ ರೇಖೆಯ ಒಂದೋ ಅಥವಾ ಎರಡೋ ಕಾಯನ್ನು ಇಟ್ಟು ಕೂಡಲೇ ಜಾಗರೂಕನಾಗಿ ತನ್ನ ಒಂದು ಕಾಯನ್ನು ಆ ರೇಖೆಯ ಇನ್ನೊಂದು ಕೇಂದ್ರಕ್ಕೆ ಇಟ್ಟುಬಿಡುವನು. ಆಗ ಯಾರ ಕಾಯನ್ನೂ ಯಾರೋ ಹೊಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದೇ ಈ ಆಟದ ವೈಶಿಷ್ಟ್ಯ ಹಾಗೂ ಜೀವಾಳ. ಹೀಗೆ ಯಾರಾದರೊಬ್ಬ ಕಾಯಿಗಳನ್ನು ಕಳೆದುಕೊಳ್ಳುವವರೆಗೆ ಆಟ ನಡೆಯುತ್ತದೆ. ಯಾರೂ ಕಾಯನ್ನು ಹೊಡೆಯಲು ಸಾಧ್ಯವಾಗದೆ ಮನೆಗಳನ್ನು ಕಟ್ಟಿ ನಿಲ್ಲಿಸಿದರೆ ಆಗ ಇಬ್ಬರೂ ತಮ್ಮ ತಮ್ಮ ಕಾಯಿಗಳನ್ನು ಎತ್ತಿಕೊಂಡು ಮೊದಲಿಂದ ಆಟವಾಡುತ್ತಾರೆ.				(ಆರ್.ಜಿ.)

24 ಬಚ್ಚದ ಕಲ್ಲು: ಆಟಗಾರರು ಬಚ್ಚ ಮತ್ತು ಕಲ್ಲು ಸಾಧನಗಳ ಜೊತೆಯಲ್ಲಿ ಬರಬೇಕು. ಸಿಗರೇಟಿನ ಅಥವಾ ಬೆಂಕಿಪೊಟ್ಟಣದ ಎಲೆಗಳಿಗೆ ಬಚ್ಚ ಎಂದು ಹೆಸರು. ಇವುಗಳಿಗೆ ಟ್ರಿಕ್ಕಿ ಎಂದೂ ಹೆಸರುಂಟು. ಇದರಿಂದ ಈ ಆಟಕ್ಕೆ ಟ್ರಿಕ್ಕಿ ಆಟ ಎಂತಲೂ ಕರೆವರು. ಇಲ್ಲಿ ಬಚ್ಚ ಅಥವಾ ಟ್ರಿಕ್ಕಿಗಳೇ ಜೂಜಿನ ಎಲೆಗಳು. ಅವುಗಳನ್ನು ಆಟಗಾರರು ಸಂಗ್ರಹಿಸಿಕೊಂಡು ಆಟಕ್ಕೆ ಬರುತ್ತಾರೆ. ಆಟವಾಡುವುದಕ್ಕೆ ಅಗಲಬಾಯುಳ್ಳ ಚಪ್ಪಟೆಕಲ್ಲನ್ನು ತರಬೇಕು. ಹೀಗೆ ಆಟಕ್ಕೆ ಬಂದವರು ಮೊದಲು ವೃತ್ತಾಕಾರದ ಅಂಡವೊಂದನ್ನು ನಿರ್ಮಿಸಿ, ಅದರಲ್ಲಿ ನಿಯತಸಂಖ್ಯೆಯ ಬಚ್ಚಗಳನ್ನು ಹಾಕುತ್ತಾರೆ. ಒಬ್ಬರು ಹಾಕಿದಷ್ಟನ್ನು ಎಲ್ಲರೂ ಹಾಕಬೇಕು. ಹೀಗೆ ಎಲ್ಲರೂ ಹಾಕಿದ ಮೇಲೆ ಎಲ್ಲ ಆಟಗಾರರೂ ನಿಯಮಿತವಾದ ದೂರದಲ್ಲಿ ನಿಂತು ಅಲ್ಲಿಂದ ಬಚ್ಚದ ಕಲ್ಲನ್ನು ಬಿಡುತ್ತಾರೆ. ಹಾಗೆ ಬಿಟ್ಟಾಗ ಕಲ್ಲುಗಳು ಒಂದಕ್ಕೊಂದು ಸ್ಪರ್ಶಿಸಿದರೆ ಅಥವಾ ಪಟ್ಟೆಯೊಳಗೆ ಬಿದ್ದರೆ ಮತ್ತೆ ಎಲ್ಲರೂ ಬಿಡಬೇಕಾಗುತ್ತದೆ. ಅಂಡದ ಹತ್ತಿರದಲ್ಲಿ ಯಾರ ಕಲ್ಲು ಬಿದ್ದಿರುತ್ತದೋ ಅವರು ಮೊದಲು ಆಟವಾಡಬೇಕಾಗುತ್ತದೆ. ಅನಂತರ ಮುಂದಿನ ಹತ್ತಿರದವನು ಹೊಡೆಯುತ್ತಾನೆ. ಹೀಗೆ ಆಟದ ಸರದಿ ಒಬ್ಬರಿಂದ ಒಬ್ಬರಿಗೆ ಬರುತ್ತದೆ. ಆಟ ಬಂದವನು ಬಚ್ಚದ ಕಲ್ಲಿನಿಂದ ಬಚ್ಚಗಳು ಅಂಡದಿಂದ ಹೊರಗೆ ಹಾರುವಂತೆ ಹೊಡೆಯುತ್ತಾನೆ. ಹೀಗೆ ಸರದಿ ಪ್ರಕಾರ ಬಚ್ಚಗಳೆಲ್ಲ ಅಂಡದಿಂದ ಹೊರಗೆ ತರುವ ತನಕ ಆಟ ಸಾಗುತ್ತದೆ. ಅವರು ಗೆದ್ದ ಬಚ್ಚಗಳೆಲ್ಲ ಅವರೇ ಇಟ್ಟುಕೊಳ್ಳುವರು. ಬಚ್ಚಗಳನ್ನೆಲ್ಲ ಗೆದ್ದುಕೊಂಡ ಮೇಲೆ, ಮತ್ತೆ ನಿಗಧಿಯಾದ ಬಚ್ಚಗಳನ್ನು ಹಾಕಿ ಆಟ ಪ್ರಾರಂಭಿಸುತ್ತಾರೆ. ಹೀಗೆ ಆಟ ನಿರಂತರವಾಗಿ ಸಾಗುತ್ತದೆ. ಇದರಲ್ಲಿ ಕೈಚಳಕ ಹಾಗೂ ಗುರಿ ಬಹಳ ಮುಖ್ಯ. ನಿಪುಣ ಆಟಗಾರರು ಇದರಲ್ಲಿ ಭಾಗವಹಿಸುವರು.

25 ಸಿರಿಯುವ ಆಟ : ಇದಕ್ಕೆ ಕಡೆಯ ಪಕ್ಷ ಇಬ್ಬರಾದರೂ ಆಟಗಾರರು ಇರಬೇಕು. ಹೆಚ್ಚು ಜನ ಇದ್ದಷ್ಟೂ ಅಟದಲ್ಲಿ ಉತ್ಸುಕತೆ ಹೆಚ್ಚುತ್ತದೆ. ಇದರಲ್ಲಿ ಭಾಗವಹಿಸುವವರು ಹುಡುಗರು. ಅವರು ಹೆಚ್ಚು ಸಮರ್ಥರಾಗಿರಬೇಕಾಗುತ್ತದೆ. ಮೊದಲು ಒಂದು ಗೆರೆ ಎಳೆಯುವರು. ಆಟದ ಸ್ಪರ್ಧಿಗಳು ಎಲ್ಲರೂ ಗೆರೆಯ ಮೇಲೆ ಕೈಗಳನ್ನು ಊರಿಕೊಂಡು ಕಾಲುಗಳನ್ನು ಹಿಂದಕ್ಕೆ ನೀಡಿ ಬಗ್ಗುವರು, ಅನಂತರ ಬಲಗಾಲಿಗೆ ಸಮತೂಕದ ಕೋಲೊಂದನ್ನು ಆರಿಸಿಕೊಂಡು, ಹೆಬ್ಬೆರಳು ಮತ್ತು ಉದ್ದನೆಯ ಬೆರಳುಗಳ ನಡುವೆ ಸಿಕ್ಕಿಸಿ, ಅದನ್ನು ರಭಸದಿಂದ ಹಿಂದಿನಿಂದ ಮುಂದಕ್ಕೆ ಎಸೆಯಬೇಕು, ಯಾರದು ಅತಿ ದೂರಕ್ಕೆ ಹೋಗಿರುತ್ತದೋ ಅವರು ಗೆದ್ದ ಹಾಗೆ. ಹೀಗೆ ಒಬ್ಬ ಉಳಿಯುವ ತನಕ ಆಟ ಮುಂದುವರಿಯುತ್ತದೆ. ಆಮೇಲೆ ಪುನಃ ಆಟ ಮೊದಲಿಂದ ಪ್ರಾರಂಭವಾಗುತ್ತದೆ. ಈ ಆಟ ಕೆಲವು ಮಟ್ಟಿಗೆ ಬಟ್ಟೆಯಾಟವನ್ನು ಹೋಲುತ್ತದೆ.

26 ನರಿಕೊಂತನ ಆಟ : ಇಲ್ಲಿಯೂ ಕೈ ತಾಳ ಹಾಕುವುದರ ಮೂಲಕ ಪಕ್ಷ ನಿರ್ಧಾರವಾಗುತ್ತದೆ. ನೆಲಕ್ಕೆ ಸುಮಾರು ಕಡ್ಡಿಗಳನ್ನು ನೆಟ್ಟಿರುತ್ತಾರೆ. ಅವುಗಳನ್ನು ಕಾಯುವವನು ಒಬ್ಬ. ಉಳಿದವರೆಲ್ಲ ಕಡ್ಡಿಗಳನ್ನು ಕೀಳಲಿಕ್ಕೆ ಪ್ರಯತ್ನಿಸುವರು. ಹೀಗೆ ಕಡ್ಡಿಗಳನ್ನು ಕೀಳಲು ಬಂದಾಗ, ಕಾಯುವವನು ಅವರನ್ನು ಹಿಡಿದರೆ, ಹಿಡಿಸಿಕೊಂಡವರೇ, ಕಡ್ಡಿಗಳನ್ನು ಕಾಯಬೇಕಾಗುತ್ತದೆ. ಕಾಯುವವನು ಹಿಡಿಯಲು ಹೋದಾಗ, ಉಳಿದವರು ಸುಮ್ಮನಿರದೆ ಬೇರೆ ಕಡೆಯಿಂದ ಬಂದು ಕಡ್ಡಿಯನ್ನು ಕೀಳುವರು, ಅಷ್ಟು ಜನರನ್ನೂ ಹೆದರಿಸಿ ಕಡ್ಡಿಗಳನ್ನು ಕಾಯಬೇಕಾಗುತ್ತದೆ.
 	
27 ಬಟ್ಟೆ ಆಟ: ಇದಕ್ಕೆ ಕುದುರೆ ಆಟ ಅಥವಾ ಸವಾರಿ ಆಟ ಎಂತಲೂ ಹೆಸರಿದೆ. ಇದರಲ್ಲಿ ಭಾಗವಹಿಸುವವರೆಲ್ಲ ಹುಡುಗರೇ. ಈ ಆಟಕ್ಕೆ ಇಬ್ಬರಿಗಿಂತ ಹೆಚ್ಚು ಮಂದಿ ಆಟಗಾರರಿರಬೇಕು. ಹೆಚ್ಚು ಜನ ಇದ್ದಷ್ಟೂ ಆಟ ರಂಗೇರುತ್ತದೆ. ಮೊದಲು ಆಟಗಾರರು ಎರಡು ಪಕ್ಷಗಳನ್ನು ಮಾಡಿಕೊಳ್ಳುತ್ತಾರೆ. ಪಕ್ಷ ನಿರ್ಧಾರವಾಗುವುದೂ ಒಂದು ವಿಶೇಷ ರೀತಿಯಲ್ಲಿ. ಹೆಚ್ಚು ಜನರಿದ್ದಾಗ ಇಬ್ಬರು ಪ್ರಮುಖರಾಗಿ ನಿರ್ಧಾರವಾಗುತ್ತಾರೆ. ಆ ಇಬ್ಬರು ಉಳಿದವರನ್ನು ಸಮಭಾಗವಾಗಿ ತಮ್ಮ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ. ಆ ಇಬ್ಬರು ಪ್ರಮುಖರೂ ಟಾಸ್ ಹಾಕಿ ಯಾರು ಆ ಗುಂಪಿನಿಂದ ಮೊದಲು ತಮ್ಮ ಕಡೆಗೆ ಆರಿಸಿಕೊಳ್ಳಬೇಕೆಂಬ ಸರದಿಯನ್ನು ನಿರ್ಧರಿಸುವರು. ಟಾಸ್‍ನಲ್ಲಿ ಗೆದ್ದವನು ತನಗೆ ಬೇಕಾದವರನ್ನು ಕರೆದು ತನ್ನ ಪಕ್ಷವನ್ನು ಕಟ್ಟಿಕೊಳ್ಳುತ್ತಾನೆ. ಉಳಿದವರು ಇನ್ನೊಬ್ಬನ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ. ಹೀಗೆ ಪಕ್ಷ ನಿರ್ಧಾರವಾದ ಅನಂತರ ಯಾರು ಆಟ ಆಡಬೇಕು, ಯಾರು ಹಿಡಿಯಬೇಕೆಂಬುದನ್ನು ಅದೇ ಟಾಸ್‍ನಿಂದಲೇ ನಿರ್ಧರಿಸುತ್ತಾರೆ ಅಥವಾ ಪರಸ್ಪರ ಒಪ್ಪಿಗೆಯಿಂದಲೂ ಇದು ಸಾಧ್ಯವಾಗಬಹುದು. ಹೀಗೆ ಮಾಡಿಕೊಂಡಮೇಲೆ ಆಟ ಪ್ರಾರಂಭವಾಗುತ್ತದೆ. ಮೊದಲು ಉದ್ದನೆಯ ಗೆರೆಯೊಂದನ್ನು ಎಳೆಯುವರು. ಗೆರೆಯ ಆಚೆ ಈಚೆ ಪಕ್ಷ ಪ್ರತಿಪಕ್ಷಗಳವರು ನಿಂತುಕೊಳ್ಳುವರು. ಆಗ ಗೆದ್ದವರು ಆಟ ಪ್ರಾರಂಭಿಸುವರು. ಆಟದ ಮುಖ್ಯ ಸಾಧನ ಹಗ್ಗ ಹೊಸೆದ ಹಾಗೆ ನುಲಿದಿರುವ ಚೌಕ (ಟವಲ್). ಚೌಕವನ್ನು ನುಲಿದು ಚೂಪಾದ ತುದಿಗೆ ಒಂದು ದಾರ ಕಟ್ಟುವರು. ಆಗ ಗೆದ್ದವರಲ್ಲಿ ಒಬ್ಬ ಬಂದು ಚೌಕದ ಚೂಪಾದ ತುದಿಯನ್ನು ತನ್ನ ಬಲಗಾಲಿನ ಹೆಬ್ಬೆರಳು ಪಕ್ಷದ ಬೆರಳುಗಳ ಮಧ್ಯೆ ಸಿಕ್ಕಿಸಿ, ಗೆರೆಗೆ ಸಮೀಪಿಸಿದಂತೆ ಕೈಗಳೆರಡನ್ನೂ ಊರಿ ರಭಸದಿಂದ ಮುಂದಕ್ಕೆ ಎಸೆಯಬೇಕು. ಹಾಗೆ ಎಸೆಯುವಾಗ ಬಟ್ಟೆ ಹಾಕಿದ ಗೆರೆಯಿಂದ ಹೊರಗೆ ಹೋಗದೆ ಒಳಗೆ ಬಿದ್ದರೆ ಅದು ಲೆಕ್ಕಕ್ಕಿಲ್ಲ. ಹಾಗೆ ಅವನಿಗೆ ಮೂರು ಸರದಿಗಳು ಮಾತ್ರ ಇರುತ್ತವೆ. ಆ ಮೂರರಲ್ಲೂ ಎಸೆಯದಿದ್ದರೆ ಅವನು ಹೊರಬಂದು, ಅವರ ಕಡೆಯ ಇನ್ನೊಬ್ಬನಿಗೆ ಆಟವನ್ನು ಬಿಟ್ಟುಕೊಡಬೇಕಾಗುತ್ತದೆ. ಹಾಗಾದರೆ ಅವನು ಎಸೆದಾಗ ಏನಾದರೂ ಎದುರು ಪಕ್ಷದವರು ಅದನ್ನು ಹಿಡಿದುಕೊಂಡರೆ (ನೆಲ ಸೋಕದಂತೆ) ಆಟ ಆಡುವವನು ಔಟಾಗಬೇಕಾಗುತ್ತದೆ. ಹಾಗೆ ಹಿಡಿದುಕೊಳ್ಳದೆ ನೆಲಕ್ಕೆ ಬಿಟ್ಟುಬಿಟ್ಟರೆ ನಿಯತವಾದ ಸಂಖ್ಯೆಯ ತನಕ ಲೆಕ್ಕ ಮಾಡುತ್ತ ಹೋಗುತ್ತಾರೆ. ಆ ಸಂಖ್ಯೆಯನ್ನು ತುಂಬಿಬಿಟ್ಟರೆ, ಕೂಡಲೇ ಸೋತವರು ಒಬ್ಬನನ್ನು ಕುದುರೆ ಕೂರಿಸಬೇಕಾಗುತ್ತದೆ. ಅಂದರೆ ಒಬ್ಬ ಬಗ್ಗುವುದು, ಅವನ ಮೇಲೆ ಗೆದ್ದವನೊಬ್ಬ ಸವಾರಿ ಕೂತುಕೊಳ್ಳುವನು. ಆಟ ಮಾತ್ರ ಸಾಗುತ್ತಲೇ ಇರುತ್ತದೆ. ಸೋತವರು ಬಟ್ಟೆಯನ್ನು ಹಿಡಿದು ಆಟವಾಡುತ್ತಿದ್ದವನನ್ನು ಔಟ್ ಮಾಡಿಬಿಟ್ಟರೆ ಆಗ ಕುದುರೆ ಕೂತವನು ಮೇಲೆದ್ದು ಮತ್ತೆ ತನ್ನ ಗುಂಪನ್ನು ಸೇರಿಕೊಳ್ಳುತ್ತಾನೆ. ಹೀಗಾಗಿ ಯಾವುದಾದರೂ ಒಂದು ಪಕ್ಷ ಔಟಾಗಿಯೋ ಅಥವಾ ಗೆದ್ದೋ ಆಟವನ್ನು ಮುಕ್ತಾಯಕ್ಕೆ ತರುವರು. ಆಗ ಹಿಡಿಯುತ್ತಿದ್ದ ಪಕ್ಷ ಬಟ್ಟೆ ಎಸೆಯುವುದಕ್ಕೂ ಎಸೆಯುತ್ತಿದ್ದ ಪಕ್ಷ ಹಿಡಿಯುವುದಕ್ಕೂ ನಿಂತುಕೊಳ್ಳುತ್ತದೆ. ಹೀಗೆ ಆಟ ನಿರಂತರವಾಗಿ ಸಾಗುತ್ತದೆ. ಇದು ತುಂಬ ಶ್ರಮದಾಯಕ ಆಟವೆಂದೇ ಹೇಳಬೇಕು.
 	
28 ಹುಳಸಪ್ಪನಾಟ: ಕಣ್ಣು ಮುಚ್ಚಿ ತಲೆಗೂದಲನ್ನು ಎಳೆಯುವುದು. ಎಳೆದವರ ಹೆಸರನ್ನು ಹೇಳುವತನಕವೂ ಹುಳಿ ಹಿಂಡೋದು. ಇದಕ್ಕೆ ಹುಳಸಪ್ಪನಾಟ ಎಂದು ಹೆಸರು. 
(ಆರ್.ಜಿ.; ಸಿ.ಜಿ.ಪಿ.; ಬಿ.ಎಲ್.ಆರ್.)
									(ಪರಿಷ್ಕರಣೆ: ಎಂ.ಬಿ.ಸಿಂಗ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ